ಬೆಂಗಳೂರು: ರಾಜಸ್ಥಾನ ಹಾಗೂ ಗುಜರಾತ್ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತು ಸರಬರಾಜು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅವ್ಯಾಹತವಾಗಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಉತ್ತರ ಭಾರತ ಮೂಲದ ಇಬ್ಬರು ದಂಧೆಕೋರರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಪಪ್ಪುರಾಮ್ ಹಾಗೂ ಚುನ್ನಿಲಾಲ್ ಬಂಧಿತರು. ಆರೋಪಿಗಳು 1.6 ಕೆ.ಜಿ ಗ್ರಾಂ. ಬ್ರೌನ್ ಶುಗರ್, 800 ಗ್ರಾಂ ಮಾದಕ ಮಾತ್ರೆ, 1.7 ಕೆ.ಜಿ. ಗಾಂಜಾ, ಕೃತ್ಯಕ್ಕೆ ಬಳಸಿದ್ದ ಕಾರು, ಎರಡು ಹುಕ್ಕಾ ಸೇದುವ ಸಾಧನ ಸೇರಿದಂತೆ 2 ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಪಪ್ಪುರಾಮ್ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮಾದಕವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ. ರಾಜಸ್ಥಾನ ಹಾಗೂ ಗುಜರಾತ್ನಲ್ಲಿ ಅಫೀಮು ಸೇರಿದಂತೆ ಕೆಲ ಮಾದಕ ವಸ್ತುಗಳನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಸಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಇದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ವ್ಯವಸ್ಥಿತ ಜಾಲದ ಮುಖಾಂತರ ಡ್ರಗ್ಸ್ ಅನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿದ್ದ. ಇದಕ್ಕೆ ಮತ್ತೊಬ್ಬ ಆರೋಪಿ ಕೈ ಜೋಡಿಸಿದ್ದ ಎನ್ನಲಾಗ್ತಿದೆ.
ಡ್ರಗ್ಸ್ ವಾಸನೆ ಬರದಿರಲು ಚಕ್ಕೆ ಪುಡಿ ಮಾಡಿ ಸಿಂಪಡಣೆ
ಡ್ರಗ್ಸ್ ದಂಧೆಯಲ್ಲಿ ಮುಳುಗಿದ್ದ ಆರೋಪಿಗಳು ರಾಜಸ್ಥಾನದಿಂದ ಬೆಂಗಳೂರಿಗೆ ಬರುವ ಗೂಡ್ಸ್ ವಾಹನಗಳ ಮುಖಾಂತರ ಪ್ಯಾಕ್ ಮಾಡಿದ ಡ್ರಗ್ಸ್ ಅನ್ನು ನಗರಕ್ಕೆ ಸಾಗಿಸುತ್ತಿದ್ದರು. ಯಾರಿಗೂ ಗುಮಾನಿ ಬರದಿರಲು ಪ್ಯಾಕಿಂಗ್ ಮಾಡಿದ ಡ್ರಗ್ಸ್ ಮೇಲೆ ಮಸಾಲ ಪದಾರ್ಥವಾದ ಚಕ್ಕೆಯನ್ನು ಪುಡಿ ಮಾಡಿ ಸಿಂಪಡಿಸುತ್ತಿದ್ದರು. ಇದರಿಂದ ಡ್ರಗ್ಸ್ ವಾಸನೆ ಬರುತ್ತಿರಲ್ಲ. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದು ಭಾವಿಸಿ ನಗರದ ಅತ್ತಿಬೆಲೆ ಬಳಿ ಡ್ರಗ್ಸ್ ಪ್ಯಾಕೆಟ್ಗಳನ್ನು ಸ್ವೀಕರಿಸುತ್ತಿದ್ದರು.
ಡ್ರಗ್ಸ್ ಅವ್ಯವಹಾರ ನಡೆಸುತ್ತಿದ್ದ ಪಪ್ಪುರಾಮ್ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಮೂರು ಮನೆ ಮಾಡಿಕೊಂಡಿದ್ದ. ಅತ್ತಿಬೆಲೆಯಲ್ಲಿ ಈತನ ಕುಟುಂಬ ವಾಸ್ತವ್ಯ ಹೂಡಿದರೆ ಚಂದ್ರಾಪುರ ಬಳಿ ಡ್ರಗ್ಸ್ ಶೇಖರಿಸಲು ಪ್ರತ್ಯೇಕ ಮನೆ ಮಾಡಿದ್ದ. ಅಲ್ಲದೆ ಪಪ್ಪುರಾಮ್ ಹಾಗೂ ಸಹಚರ ಚುನ್ನಿಲಾಲ್ ಇಬ್ಬರು ಉಳಿದುಕೊಳ್ಳಲು ಮತ್ತೊಂದು ಮನೆ ಮಾಡಿಕೊಂಡಿದ್ದ. ಗಿರಿನಗರ, ಹನುಮಂತನಗರ ಹಾಗೂ ಸಿಟಿ ಮಾರ್ಕೆಟ್ ಸೇರಿದಂತೆ ವಿವಿಧ ಕಡೆ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಮೂರು ತಿಂಗಳಿಗೊಮ್ಮೆ ಮನೆ ಹಾಗೂ ಮೊಬೈಲ್ ಬದಲಾವಣೆ
ನಿರಂತರವಾಗಿ ಡ್ರಗ್ಸ್ ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಪೊಲೀಸರ ಭೀತಿಯಿಂದ ಮೂರು ತಿಂಗಳಿಗೊಮ್ಮೆ ಮನೆ ಬದಲಾವಣೆ ಜೊತೆಗೆ ಮೊಬೈಲ್ ಚೇಂಜ್ ಮಾಡುತ್ತಿದ್ದರು. ಇದರಿಂದ ಪೊಲೀಸರು ಆರೋಪಿಗಳನ್ನು ಹಿಡಿಯಲು ಕಷ್ಟಸಾಧ್ಯವಾಗಿತ್ತು. ಅಲ್ಲದೆ ಹಳೆಯ ಹಾಗೂ ನಂಬಿಕಸ್ಥ ಗ್ರಾಹಕರನ್ನು ಹೊರತುಪಡಿಸಿದರೆ ಅಪರಿಚಿತರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿರಲಿಲ್ಲ.
ಕಳೆದ ಹತ್ತು ತಿಂಗಳಿಂದ ಆರೋಪಿಗಳ ಬೆನ್ನು ಬಿದ್ದಿದ್ದ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಗಳ ಹಳೆ ಗ್ರಾಹಕನೊಬ್ಬನ ಮುಖಾಂತರ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ. ಪ್ರಮುಖ ಆರೋಪಿ ಪಪ್ಪುರಾಮ್ ನನ್ನ 2019 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಹನುಮಂತನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಬಂದ ಮತ್ತೋರ್ವ ಆರೋಪಿ ಜೊತೆಗೂಡಿ ದಂಧೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ಸಚಿವ ಸ್ಥಾನ ಸಿಕ್ಕಿರುವುದು ಸನ್ಮಾನ ಸ್ವೀಕರಿಸಲು ಅಲ್ಲ, ಜನ ಸೇವೆ ಮಾಡಲು: ಹೆಚ್ಡಿಕೆ