ಬೆಂಗಳೂರು: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಡ್ರಗ್ಸ್ ಮಾಫಿಯಾ ನಂಟು ಹಿನ್ನೆಲೆಯಲ್ಲಿ ಎನ್‌ಸಿಬಿ ವಿಚಾರಣೆ ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾಲಕ್ಷೀ ಲೇಔಟ್ ಕಾಂಗ್ರೆಸ್ ಕಾರ್ಪೊರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ಆತನಿಗಾಗಿ ಶೋಧ ಕಾರ್ಯ ಮುಂದುವರೆಸಿದೆ.
ಡ್ರಗ್ಸ್ ಮಾಫಿಯಾ ನಂಟು ಆರೋಪ: ಕಾರ್ಪೊರೇಟರ್ ಮಗನಿಗಾಗಿ ಎನ್‌ಸಿಬಿ ಶೋಧ
ಮಹಾಲಕ್ಷೀ ಲೇಔಟ್ ಕಾಂಗ್ರೆಸ್ ಕಾರ್ಪೊರೇಟರ್ ಕೇಶವಮೂರ್ತಿ ಅವರ ಪುತ್ರ ಯಶಸ್ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ಆತನಿಗಾಗಿ ಎನ್‌ಸಿಬಿ ಶೋಧ ಕಾರ್ಯ ಮುಂದುವರೆಸಿದೆ.
ಈ ಹಿಂದೆ ಎನ್‌ಸಿಬಿ ಸೆಪ್ಟೆಂಬರ್ 7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ ಒಮ್ಮೆ ವಿಚಾರಣೆಗೆ ಹಾಜರಾದ ಯಶಸ್ ನಂತರ ತಲೆಮರೆಸಿಕೊಂಡಿದ್ದಾನೆ. ಆ ಬಳಿಕ ಎನ್‌ಸಿಬಿ, ಸಿಸಿಬಿ ನೇತೃತ್ವದಲ್ಲಿ ದಾಳಿ ನಡೆಸಿ ಹುಡುಕಾಟ ನಡೆಸಲಾಗಿತ್ತು. ಸದ್ಯ ಡ್ರಗ್ಸ್ ಜಾಲದ ತನಿಖೆ ಗಂಭೀರ ಸ್ವರೂಪ ಪಡೆಯುತ್ತಿದೆ. ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದರೂ ಸಹ ಯಶಸ್ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗ್ತಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ನಂಟಿನ ಆರೋಪ ಹಿನ್ನೆಲೆ ನಾರ್ಕೋಟಿಕ್ಸ್ ಕಂಟ್ರೋಲರ್ ಬ್ಯೂರೊ ತನಿಖೆಗೆ ಇಳಿದಿತ್ತು. ಈ ವೇಳೆ ಡ್ರಗ್ಸ್ ಪೆಡ್ಲರ್ ಮೊಹಮ್ಮದ್ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ವಿಚಾರ ಬಯಲಾಗಿತ್ತು. ನಂತರ ಎನ್‌ಸಿಬಿ ಆರೋಪಿ ಮೊಹಮದ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊಹಮ್ಮದ್ ಜೊತೆಕಾರ್ಪೊರೇಟರ್ ಮಗ ಯಶಸ್ ಸಂಪರ್ಕ ಹೊಂದಿರುವ ವಿಚಾರ ತಿಳಿದುಬಂದಿದೆ ಎನ್ನಲಾಗ್ತಿದೆ.