ಬೆಂಗಳೂರು: ಹಲವು ವರ್ಷಗಳಿಂದ ಪೊಲೀಸ್ ಮಾಹಿತಿದಾರನಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯ ನಿಜ ಬಣ್ಣ ಕೊನೆಗೂ ಬಯಲಾಗಿದೆ. ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಡಿ ಈತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ರತನ್ ಲಾಲ್ ಬಂಧಿತ ಆರೋಪಿಯಾಗಿದ್ದು, ಏರ್ಗನ್, 150 ಗ್ರಾಂ ಗಾಂಜಾ, 150 ಗ್ರಾಂ ಅಫೀಮು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ರತನ್ ಲಾಲ್. ಈತ ನೀಡಿದ ಸುಳಿವಿನ ಮೇರೆಗೆ ಜಯನಗರ, ಗಿರಿನಗರ, ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಹಿಡಿಯಲು ಸಹಕಾರಿಯಾಗಿದ್ದ.
ಬಂಧಿಸಲು ಬಂದಾಗ ಕಂಟ್ರೋಲ್ ರೂಮ್ಗೆ ಕರೆ
ಮಾದಕವಸ್ತು ಅಕ್ರಮ ಜಾಲದಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಮೇರೆಗೆ ಮೊನ್ನೆ ಮಫ್ತಿಯಲ್ಲಿದ್ದ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಆದರೆ ಇದು ತಿಳಿಯದೆ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ, ತನ್ನನ್ನು ಯಾರೋ ಕಿಡ್ಯಾಪ್ ಮಾಡುತ್ತಿರುವುದಾಗಿ ತಿಳಿಸಿದ್ದ.
ಈ ಕರೆ ಬೆನ್ನಲ್ಲೇ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮಫ್ತಿಯಲ್ಲಿ ಬಂದಿರುವುದು ನಿಜವಾದ ಪೊಲೀಸರೇ ಎಂದು ಅರಿತು ರತನ್ ಲಾಲ್ ಹಾಗೂ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದರು. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನ ಬಳಿ ಮಾದಕವಸ್ತು ಪತ್ತೆಯಾಗಿದೆ ಎನ್ನಲಾಗ್ತಿದೆ.
ಕಳೆದ 8 ವರ್ಷಗಳಿಂದ ಖುದ್ದು ದಂಧೆಕೋರರಿಂದ ಡ್ರಗ್ಸ್ ಖರೀದಿಸುತ್ತಿದ್ದ. ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಪೊಲೀಸರಿಗೆ ಮಾಹಿತಿದಾರನಾಗಿ ಗುರುತಿಸಿಕೊಂಡಿದ್ದ. ಈಗಾಗಲೇ ಆರೋಪಿಯಿಂದ ಸಿಂಥೆಟಿಕ್ ಹಾಗೂ ನಾನ್ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶಾಮೀಲು ಶಂಕೆ
ಗಾಂಜಾ, ಆಫೀಮು ಸೇರಿದಂತೆ ವಿವಿಧ ಮಾದರಿಯ ಮಾದಕವಸ್ತುಗಳನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಜಸ್ಥಾನ ಮೂಲದ ದಂಧೆಕೋರರಿಂದ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಅಲ್ಲದೆ ಆಂಧ್ರದ ನಕ್ಸಲರ ಜೊತೆ ನಂಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಶಾಖಪಟ್ಟಣ ಮತ್ತು ಒಡಿಶಾ ಗಡಿಭಾಗಗಳಲ್ಲಿರುವ ನಕ್ಸಲ್ ಜೊತೆ ನಂಟು ಹೊಂದಿರುವ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಈತನ ಜೊತೆ ಕೆಲ ಪೊಲೀಸರು ಕೂಡ ಶಾಮೀಲಾಗಿರುವ ಶಂಕೆ ಹಿನ್ನೆಲೆಯಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:ಕೆಲಸ ಮಾಡ್ತಿದ್ದ ಅಂಗಡಿಗೇ ಕನ್ನ, ಐಷಾರಾಮಿ ಜೀವನ.. ಇಬ್ಬರು ಖದೀಮರು ಅಂದರ್