ಬೆಂಗಳೂರು:ಮಾದಕವಸ್ತು ಜಾಲ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿ ಅವರನ್ನು 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಇದೇ ವೇಳೆ ಪ್ರಕರಣನ್ನು ಸಿಸಿಹೆಚ್ 33 - ಎನ್ಡಿಪಿಎಸ್ ವಿಶೇಷ ಕೋರ್ಟ್ಗೆ ವರ್ಗಾಯಿಸಿ ಆದೇಶಿಸಿದೆ. ಪ್ರಕರಣದಲ್ಲಿ ಎನ್ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳನ್ನು ನಮೂದಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ವ್ಯಾಪ್ತಿ ಬದಲಾಗುವ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಸಂಜನಾ ಸಲ್ಲಿಸಿದ್ದ ಅರ್ಜಿಯನ್ನು ನಗರದ 1ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಸಂಜನಾ ಪರ ವಕೀಲರು ಪ್ರಕರಣದಲ್ಲಿ ಸಂಜನಾ ಪಾತ್ರ ಏನೆಂಬುದನ್ನೇ ಪೊಲೀಸರು ಸರಿಯಾಗಿ ತಿಳಿಸಿಲ್ಲ. ಸೂಕ್ತ ಆರೋಪಗಳಿಲ್ಲದೆ ಅವರನ್ನು ಬಂಧಿಸಿರುವುದರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಾರದು. ಪ್ರಕರಣವನ್ನು ಸಿಸಿಹೆಚ್ -33 ರ ವಿಶೇಷ ಕೋರ್ಟ್ಗೆ ವರ್ಗಾವಣೆ ಮಾಡಬೇಕಿತ್ತು. ಆದರೆ ಜಾಮೀನು ಸಿಗಬಾರದೆಂದೇ ಹೀಗೆ ಮಾಡಲಾಗಿದೆ. ಹೀಗಾಗಿ ಪ್ರಕರಣವನ್ನು ವರ್ಗಾವಣೆ ಮಾಡುವವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಾರದು ಎಂದು ಮನವಿ ಮಾಡಿದರು.