ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ನಾನು ಈವರೆಗೂ ಮಾತನಾಡಿಲ್ಲ. ನನಗೆ ತಿಳಿದಿರುವ ಮಟ್ಟಿಗೆ ನಗರದಲ್ಲಿ ರಾತ್ರಿಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಪಾರ್ಟಿಗಳು ನಡೆಯುತ್ತವೆ. ಅಲ್ಲಿಂದಲೇ ಡ್ರಗ್ಸ್ ಜಾಡು ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆ ಪಿ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದ ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ಬೆಳಗಿನವರೆಗೆ ಪಾರ್ಟಿಗಳು ನಡೆಯುತ್ತಿರುತ್ತವೆ. ಅನೇಕ ಹೆಣ್ಣುಮಕ್ಕಳು ರಸ್ತೆಯಲ್ಲಿ ಬಿದ್ದಿರುವುದನ್ನು ಜನ ನೋಡಿದ್ದಾರೆ. ಇನ್ನು ಮಲ್ಯ ರಸ್ತೆಯ ಮೈಕ್ರೋ ಬ್ರೀವರಿಸ್ ಯಾರದ್ದು?. ಸರ್ಕಾರದಲ್ಲಿರುವವರೇ ಈ ರೆಸ್ಟೋರೆಂಟ್‌ಗೆ ಹೂಡಿಕೆ ಮಾಡಿದ್ದಾರೆ. ಇದೆಲ್ಲವೂ ಹೊರಗೆ ಬರಬೇಕು. ಈ ಪ್ರಕರಣ 15 ದಿನಗಳಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.
ಡಾನ್ಸ್ ಬಾರ್, ಬೆಟ್ಟಿಂಗ್ ಮಾಫಿಯಾಗಳು ಸರ್ಕಾರ ಬೀಳಿಸಲು ಕಾರಣ. ಹೀಗೆಂದು ನಾನು ಹೇಳಿಕೆ ನೀಡಿದ್ದು ನಿಜ. ಕ್ರಿಕೆಟ್ ಬೆಟ್ಟಿಂಗ್, ಡಾನ್ಸ್ ಬಾರ್ ಮುಚ್ಚಲು ಕ್ರಮ ಕೈಗೊಳ್ಳಲು ಮೈತ್ರಿ ಸರ್ಕಾರದಲ್ಲಿ ನಾನು ಸೂಚಿಸಿದ್ದೆ. ಅಧಿಕಾರಿಗಳು ದಾಳಿ ಮಾಡಲು ಆರಂಭಿಸಿದ್ದರು. ಆ ಸಂದರ್ಭದಲ್ಲಿ ಒಬ್ಬ ಶ್ರೀಲಂಕಾಗೆ ಓಡಿಹೋಗಿದ್ದ, ಆಮೇಲೆ ಬೇಲ್ ತೆಗೆದುಗೊಂಡು ಬಂದಿದ್ದ. ಆನಂತರ ಮುಂಬೈಗೆ ಶಾಸಕರು ಹೋದಾಗ ಅವರ ಜೊತೆ ಇದ್ದ ಫೋಟೋ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಡ್ಯಾನ್ಸ್ ಬಾರ್‌ಗಳಿಗೆ ಹಣ ಎಲ್ಲಿಂದ ಬರುತ್ತದೆ. ಡ್ರಗ್ಸ್ ಎಲ್ಲಿಂದ ದೊರೆಯುತ್ತಿದೆ. ಯಾರೆಲ್ಲ ಇದರ ಹಿಂದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಬರೀ ಮೂರ್ನಾಲ್ಕು ಜನರನ್ನು ಹಿಡಿದುಕೊಂಡು ಎಳೆದಾಡಿದರೆ ಪ್ರಯೋಜನ ಆಗುವುದಿಲ್ಲ. ಎಲ್ಲದರ ಪ್ರಾಮಾಣಿಕ ತನಿಖೆ ಮಾಡದೇ ಇದ್ರೆ ಪ್ರಕರಣ ಸಧ್ಯದಲ್ಲೇ ಮುಚ್ಚಿ ಹೋಗುತ್ತದೆ ಎಂದು ಹೆಚ್ಡಿಕೆ ಹೇಳಿದರು.
ಈ ನೀಚ ಕೃತ್ಯಗಳಲ್ಲಿ ಬರೀ ರಾಜಕಾರಣಿಗಳು ಮಾತ್ರವಲ್ಲ, ಬಹಳಷ್ಟು ಜನ ಅಧಿಕಾರಿಗಳು ಕೂಡ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿದರೆ ಹಾರಿಕೆ ಉತ್ತರ ಸಿಗುತ್ತದೆ ಅಷ್ಟೇ. ಅದರ ಬದಲಾಗಿ ರೈತರ ಸಮಸ್ಯೆ, ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಅಧಿಕಾರದಿಂದ ನನಗೆ ಮತ್ತು ಬರುವುದಿಲ್ಲ. ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. ಮಲಗಿದ್ದರೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿತ್ತಾ? ಎಂದು ಸಚಿವ ಸಿ. ಟಿ. ರವಿ ಅವರಿಗೆ ಮತ್ತೊಮ್ಮೆ ತಿರುಗೇಟು ನೀಡಿದರು.