ಬೆಂಗಳೂರು: ಮೂರು ವರ್ಷಗಳ ಹಿಂದೆ ಮಾದಕ ದಂಧೆ ಪ್ರಕರಣಗಳಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ಹೆಸರು ಕೇಳಿಬಂದಿತ್ತು. ಕನ್ನಡ ಚಿತ್ರರಂಗದಲ್ಲಿ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಮಾದಕ ವಸ್ತುಗಳ ದಂಧೆಕೋರರೊಂದಿಗೆ ಸ್ಯಾಂಡಲ್ವುಡ್ ತಾರೆಯರ ಹೆಸರು ಕೇಳಿಬಂದಿದೆ.
ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ವಿದೇಶಿ ಡ್ರಗ್ಸ್ ಪೆಡ್ಲರ್ ಜೊತೆ ಕೆಲ ನಟ ನಟಿಯರ ಸಂಪರ್ಕವಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿರುವ ಬೆಂಗಳೂರಿಗೆ ವಿದೇಶಿ ಮಾದಕ ಪದಾರ್ಥ ಬಂದು ತಲುಪುತ್ತಿದೆ ಎಂಬ ವಿಚಾರ ಪೊಲೀಸರಿಗೆ ತಿಳಿದು ಬಂದಿತ್ತು. ಅದರ ವಿರುದ್ಧ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ಇತ್ತೀಚೆಗೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಆಫ್ರಿಕಾ ಮೂಲದ ಆರೋಪಿ ಲಿಯೋನಾರ್ಡ್ ಒಕ್ವುಡಿಲಿ (44) ಎಂಬಾತನನ್ನು ಬಂಧಿಸಿ, ಅಂದಾಜು 21 ಕೋಟಿ ರೂ. ಬೆಲೆಬಾಳುವ 16 ಕೆ.ಜಿ ತೂಕದ ಮಾದಕ ಪದಾರ್ಥ, 500 ಗ್ರಾಂ ತೂಕದ ಕೊಕೇನ್, 1 ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.