ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿನ ಬರ ಕಾಮಗಾರಿಗಳ ಮೇಲೆ ಕೊರೊನಾ ಕರಿನೆರಳು ಬಿದ್ದ ಪರಿಣಾಮ ರಾಜ್ಯದ ಬರಪೀಡಿತ ತಾಲೂಕುಗಳ ಘೋಷಣೆಯನ್ನ ಒಂದು ತಿಂಗಳ ಕಾಲ ವಿಸ್ತರಣೆ ಮಾಡಿ ಅಭಿವೃದ್ಧಿ ಕಾರ್ಯ ಆರಂಭಕ್ಕೆ ಸೂಚನೆ ನೀಡಿದೆ.
ಹೌದು, ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದು, ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ಪೂರೈಕೆ ಯೋಜನೆಗಳ ಅನುಷ್ಠಾನಕ್ಕೆ ಕೊರೊನಾದ ಕರಿನೆರಳು ಬಿದ್ದಿದ್ದು, ಎರಡು ತಿಂಗಳ ಕಾಲ ಬರ ಕಾಮಗಾರಿಗಳಿಗೆ ಕೋವಿಡ್ ಬರೆ ಎಳೆದಿದೆ. ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ಮತ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು ನಗರದ 3, ಬೆಂಗಳೂರು ಗ್ರಾಮಾಂತರ 3, ರಾಮನಗರ 2, ಕೋಲಾರ 5, ಚಿಕ್ಕಬಳ್ಳಾಪುರ 3, ತುಮಕೂರು 7, ಚಿತ್ರದುರ್ಗ 3, ದಾವಣಗೆರೆ 1, ಚಾಮರಾಜನಗರ 1, ಬಳ್ಳಾರಿ 4, ಕೊಪ್ಪಳ 1, ರಾಯಚೂರು 3, ಕಲಬುರಗಿ 3, ಯಾದಗಿರಿ 1, ಬೆಳಗಾವಿ 1, ಬಾಗಲಕೋಟೆ 3, ವಿಜಯಪುರ 4, ಗದಗದ 1 ತಾಲೂಕು ಸೇರಿ 18 ಜಿಲ್ಲೆಗಳ 49 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ.
ಬರ ಪೀಡಿತ ತಾಲೂಕುಗಳಲ್ಲಿ ಬರ ನಿರ್ವಹಣೆಗೆ ಕೊರೊನಾ ಕರಿನೆರಳು ಬಿದ್ದಿದ್ದು, ಕಳೆದ ಒಂದೆರಡು ತಿಂಗಳಿನಿಂದ ಬರ ನಿರ್ವಹಣಾ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಗೋ ಶಾಲೆಗಳ ಆರಂಭ, ಮೇವು ಸಂಗ್ರಹ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ, ಕೆರೆಗಳ ಹೂಳೆತ್ತುವ ಕಾರ್ಯ, ಟ್ಯಾಂಕರ್ ಮೂಲಕ ಹಳ್ಳಿಗಳಿಗೆ ನೀರು ಪೂರೈಕೆ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.
ಸಾಮಾಜಿಕ ಅಂತರ ಪಾಲನೆ ನಿಯಮದ ಕಾರಣದಿಂದ ರಾಜ್ಯದ ಇತರ ಭಾಗದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿದಂತೆ ಬರಪೀಡಿತ ತಾಲೂಕುಗಳಲ್ಲಿಯೂ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನ ನಿಲ್ಲಿಸಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆ, ರಸ್ತೆ ದುರಸ್ತಿ ಸೇರಿದಂತೆ ಎಲ್ಲ ಕಾಮಗಾರಿಗಳು ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದವು. ಸದ್ಯದ ಮಟ್ಟಿಗೆ ಇತರ ಎಲ್ಲ ಯೋಜನೆ ನಿಲ್ಲಿಸಿ ಕೇವಲ ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡಿ ಎನ್ನುವ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ಕೂಡ ಇದಕ್ಕೆ ಕಾರಣವಾಗಿರಬಹುದು.