ಬೆಂಗಳೂರು: ಕೇಂದ್ರ ಸರ್ಕಾರದ ಬರ ಪರಿಹಾರ ಬಿಡುಗಡೆಯಾಗುವ ತನಕ ರಾಜ್ಯದ ರೈತರಿಗೆ ಬರ, ಬೆಳೆ ನಷ್ಟ ಪರಿಹಾರವಾಗಿ ತಲಾ ಗರಿಷ್ಠ 2,000 ರೂ.ವರೆಗೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅಡಿ ಬರ ಪರಿಹಾರ ಬಿಡುಗಡೆ ವಿಳಂಬ ಹಿನ್ನೆಲೆ ಮೊದಲ ಕಂತಿನಲ್ಲಿ ರೈತರಿಗೆ ಬೆಳೆ ಪರಿಹಾರವಾಗಿ ತಲಾ ಗರಿಷ್ಟ 2,000 ರೂ.ವರೆಗೆ ಬೆಳೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಕನಿಷ್ಠ 1,000 ರೂ. ನಷ್ಟ ಪರಿಹಾರ ನೀಡಲಾಗುತ್ತದೆ. ಜಮೀನಿನ ವಿಸ್ತೀರ್ಣದ ಆಧಾರದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ. ನಾಲ್ಕೈದು ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಕೇಂದ್ರದಿಂದ ಹಣ ಬರುವವರೆಗೆ ಈ ರೀತಿ ಪಾವತಿ ಮಾಡುತ್ತೇವೆ. ಸಮೀಕ್ಷೆ ಆಧಾರದಲ್ಲಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿ ರಾಜ್ಯದಲ್ಲಿನ ಒಟ್ಟು 236 ತಾಲೂಕುಗಳ ಪೈಕಿ 223 ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರದಿಂದಾಗಿ ರಾಜ್ಯ ಸುಮಾರು 48.19 ಲಕ್ಷ ಹೆಕ್ಟೇರ್ನಷ್ಟು ಬೆಳೆ ನಷ್ಟ ಆಗಿದೆ. ಒಟ್ಟು 33,770.10 ಕೋಟಿ ರೂ. ಬರ ನಷ್ಟ ಅಂದಾಜಿಸಲಾಗಿದೆ. ಈ ಪೈಕಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿ (NDRF) ನಡಿ 18,171.44 ಕೋಟಿ ರೂ. ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ. ಬಳಿಕ 21/09/2023ರಂದು ಮೊದಲ ಮೆಮೊರಾಡಂ ಕೊಟ್ಟಿದ್ದೆವು. ಬಳಿಕ ಕೇಂದ್ರದ ತಂಡ ಅಕ್ಟೋಬರ್ ನಲ್ಲಿ ಬರ ಅಧ್ಯಯನ ಮಾಡಿತು. ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಇದೆ. ಕೇಂದ್ರ ಬರ ಅಧ್ಯಯನ ತಂಡ ಸಭೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಬರದಿಂದ ರಾಜ್ಯದಲ್ಲಿ ಬೆಳೆ ನಷ್ಟ ಪರಿಹಾರ 4,663.12 ಕೋಟಿ ರೂ. ಆಗಿದೆ. ಈವರೆಗೆ ಬರ ಪರಿಹಾರ ಸಂಬಂಧ ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಭೆ ಕರೆದಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಕಂದಾಯ ಸಚಿವರು, ಕೃಷಿ ಸಚಿವರು ದೆಹಲಿಗೆ ಹೋಗಿದ್ದಾರೆ. ಆಗ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ಹಾಗೂ ಕೃಷಿ ಸಚಿವರೂ ಸಿಕ್ಕಿಲ್ಲ. ಬಳಿಕ ಅಧಿಕಾರಿಗಳನ್ನು ಭೇಟಿ ಮಾಡಿ ಬರ ಪರಿಸ್ಥಿತಿ ವಿವರಿಸಿದ್ದಾರೆ. ಆ ಮೇಲೆ ಕಂದಾಯ ಹಾಗೂ ಕೃಷಿ ಸಚಿವರು ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್ಗೆ 8,500 ರೂ. ಮಳೆ ಆಶ್ರಿತ ಬೆಳೆಗೆ ಪರಿಹಾರ ನಿಗದಿ ಮಾಡಿದೆ. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್ಗೆ 17,000 ರೂ., ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್ಗೆ 22,500 ರೂ. ಪರಿಹಾರ ಹಣ ನಿಗದಿ ಮಾಡಿದೆ. ಮಾರ್ಗಸೂಚಿ ಅನ್ವಯ ಎರಡು ಹೆಕ್ಟೇರ್ವರೆಗೆ ಮಾತ್ರ ಬೆಳೆ ಪರಿಹಾರ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವರಿಗೆ ನಾನು ಪತ್ರ ಬರೆದು, ನನಗೆ ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿದ್ದೇನೆ. ಆದರೆ ಈವರೆಗೆ ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದರು.