ಬೆಂಗಳೂರು:ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಮಾಡಿ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳಲಿದ್ದಾರೆ. ಸರ್ಕಾರದ ಈ ನಡೆ ಬೈಕ್ ಹಾಗೂ ಟ್ಯಾಕ್ಸಿ ಸಂಸ್ಥೆಗಳೊಂದಿಗೆ ಲಾಭಿ ನಡೆಸಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಹಾಗೆ ಕಾಣುತ್ತಿದೆ ಎಂದು ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷಾ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬೆಳಗ್ಗೆ 11 ಗಂಟೆಗೆ ಕೆಎಚ್ ರಸ್ತೆ (ಡಬಲ್ ರೋಡ್)ಯಲ್ಲಿರುವ ಸಂಘಟನೆಯ ಮುಖ್ಯ ಕಚೇರಿಯಿಂದ ಸಾರಿಗೆ ಆಯುಕ್ತರ ಕಚೇರಿಯವರೆಗೆ 200ಕ್ಕೂ ಅಧಿಕ ಚಾಲಕರು ಹಾಗೂ ಸಂಘದ ಪದಾಧಿಕಾರಿಗಳು ಕಾಲ್ನಡಿಗೆ ಮೂಲಕ ತೆರಳಿ ಯೋಜನೆ ಕೂಡಲೆ ಹಿಂಪಡೆಯುವಂತೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.