ಬೆಂಗಳೂರು: ಸಾಂಪ್ರದಾಯಿಕ ಉಡುಗೆ ತೊಡುಗೆಗೆ ಹೊಸ ಫ್ಯಾಷನ್ ಟ್ರೆಂಡ್ ಆಗಿಸಿದ್ರೇ ಹೇಗಿರುತ್ತೆ. ದೇಸಿತನಕ್ಕೆ ಫ್ಯಾಷನ್ ರಂಗು ತಂದು ರ್ಯಾಂಪ್ ವಾಕ್ ಮಾಡಿದ್ರೇ ಅದನ್ನ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ.
ಇವರಲ್ಲಿ ಸೊಗಸಿದೆ, ನಡುಗೆಯಲ್ಲಿ ಬಿಂಕ ಬಿನ್ನಾಣವೂ ಎದ್ದು ಕಾಣುತ್ತೆ. ಹೀಗೆ ಥಳಕು ಬಳಕು ಹೆಜ್ಜೆ ಹಾಕುತ್ತಿರುವ ಇವರನ್ನು ನೋಡಿದ್ರೆ ಬೆಕ್ಕು ಸಹ ಒಮ್ಮೆ ನಾಚುತ್ತೆ. ಇವರ ವೈಯ್ಯಾರ ನೋಡುಗರ ಹೃದಯಕ್ಕೆ ಕಿಕ್ ಕೊಡೋದಂತು ನಿಜ. ದೇಶದ ಆರ್ಥಿಕ ಕುಸಿತದ ಸವಾಲು ಎದುರಿಸುತ್ತಿರುವ ದಿನಗಳಲ್ಲಿ ಗ್ರಾಮ ಸೇವಾ ಸಂಘ ವಿಭಿನ್ನ ಚಳವಳಿಗೆ ಮುಂದಾಗಿದೆ. ಅಕ್ಟೋಬರ್ 2ರಿಂದ ಸಾಮಾಜಿಕ ಹೋರಾಟಗಾರ ಪ್ರಸನ್ನ, ಪವಿತ್ರ ಆರ್ಥಿಕತೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು, ಅದರ ಭಾಗವಾಗಿ ವಿಭಿನ್ನ ಫ್ಯಾಷನ್ ಶೋ ಮೂಲಕ ಚಳವಳಿಗೆ ಚಾಲನೆ ನೀಡ್ಲಾಯಿತು.
ನಗರದ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರಸಾದ್ ಬಿಡ್ಡಪ್ಪನವರ ಫ್ಯಾಷನ್ ಸಂಸ್ಥೆಯಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಫ್ಯಾಷನ್ ಶೋ ನಡೆಸಲಾಯಿತು. ಈ ಮೂಲಕ ವಿಭಿನ್ನ ಚಳವಳಿಗೆ ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ, ಕೈಮಗ್ಗ ಹೋರಾಟಗಾರ್ತಿ ಉಜ್ರಮ್ಮ, ಫ್ಯಾಷನ್ ವಿನ್ಯಾಸಗಾರ ಪ್ರಸಾದ್ ಬಿಡ್ಡಪ್ಪ ಹಾಗೂ ರಂಗಕರ್ಮಿ, ಹೋರಾಟಗಾರ ಪ್ರಸನ್ನ ಚಾಲನೆ ನೀಡಿದ್ರು. ಖಾದಿ ಬಟ್ಟೆ ತೊಟ್ಟ ಮಾಡೆಲ್‌ಗಳು ಕ್ಯಾಟ್ವಾಕ್ ಮಾಡಿದ್ದು ಸ್ವರ್ಗಕ್ಕೇ ಕಿಚ್ಚು ಹಚ್ಚುವಂತಿತ್ತು. ಪ್ರಸನ್ನ ಅವರು ಚರಕ ಸಂಸ್ಥೆಯ ಮೂಲಕ ಖಾದಿ ಉದ್ಯಮ ನಡೆಸಿತ್ತಿದ್ದಾರೆ.
ಬಂಡವಾಳಗಾರರು, ಉದ್ಯಮಿಗಳು ಹಾಗೂ ಸರ್ಕಾರ ಹೆಚ್ಚೆಚ್ಚು ಉದ್ಯೋಗಗಳನ್ನು ನೀಡಬೇಕು. ಜತೆಗೆ ಪರಿಸರವನ್ನೂ ರಕ್ಷಣೆ ಮಾಡಲು ಕ್ರಮಕೈಗೊಳ್ಳಬೇಕು. ಉದ್ಯೋಗಕ್ಕಾಗಿ ಪರಿಸರ ನಾಶ ಮಾಡಬಾರದು. ಇದೇ ಪವಿತ್ರ ಆರ್ಥಿಕತೆ ಎಂಬ ತತ್ವವನ್ನು ಇಟ್ಟುಕೊಂಡು ಈ ಚಳವಳಿ ಆರಂಭಿಸಲಾಗಿದೆ.