ಬೆಂಗಳೂರು :ನಮ್ಮಲ್ಲಿ ಕೃಷಿ ಬೆಳೆದಿದೆ. ಆದರೆ, ಕೃಷಿಯನ್ನು ಬೆಳೆಸಿದ ರೈತ ಸಂಕಷ್ಟದಲ್ಲಿದ್ದಾನೆ. ಹೀಗಾಗಿ, ಸರ್ಕಾರಗಳು ರೈತನನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಇದೆ ಎಂದು ಸಿಎಂ ಬಸವರಾಜ ಎಸ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕೃಷಿ ಬೆಳೆದಿದೆ. ಆದರೆ, ಕೃಷಿಯನ್ನು ಬೆಳೆಸಿದ ರೈತ ಸಂಕಷ್ಟದಲ್ಲಿದ್ದಾನೆ. ಕೃಷಿ ಅಭಿವೃದ್ಧಿ ಜೊತೆಗೆ ಸರ್ಕಾರಗಳು ರೈತರ ಅಭಿವೃದ್ಧಿ ಪಡಿಸುವ ಚಿಂತನೆ ಮಾಡುವ ಅವಶ್ಯಕತೆ ಇದೆ. ಯಾಕೆಂದರೆ, ರೈತ ಉಳಿದರೆ ಕೃಷಿ ಉಳಿಯುತ್ತದೆ. ಹಾಗಾಗಿ, ರೈತನ ಶ್ರಮಕ್ಕೆ, ಆತನ ಬೆವರಿಗೆ ಸರಿಯಾದ ಬೆಲೆ ಕೊಡುವ ಕಾಲ ಬಂದಿದೆ ಎಂದು ತಿಳಿಸಿದರು.
ಮೋದಿ ಓರ್ವ ಮುತ್ಸದ್ಧಿ ರಾಜಕಾರಣಿ :ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳುವುದು ಧೈರ್ಯದ ಮಾತು. ಅಂಥ ಧೈರ್ಯವನ್ನು ಮೋದಿಯವರು ತೋರಿದ್ದಾರೆ. ಮೋದಿಯವರಂಥ ಮುತ್ಸದ್ಧಿ ರಾಜಕಾರಣಿ ನಮಗೆ ಸಿಕ್ಕಿದ್ದಾರೆ. ಯೋಜನೆಗಳು ಮೊದಲು ಮನಸ್ಸಿನಲ್ಲಿ ತಯಾರಾಗುತ್ತವೆ. ಬಳಿಕ ಕಾರ್ಯರೂಪಕ್ಕೆ ಬರುತ್ತವೆ. ರೈತರ ಆದಾಯ ಎರಡು ಪಟ್ಟು ಆಗಬೇಕು ಅನ್ನೋದು ಪ್ರಧಾನಿಯವರ ವಿನೂತನ ಯೋಚನೆ. ಈ ಯೋಚನೆಗೆ ಬಹಳಷ್ಟು ಧೈರ್ಯ ಬೇಕು ಎಂದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇದು ಅಷ್ಟು ಸುಲಭವಾಗಿ ಸಾಧ್ಯವಾಗಿಲ್ಲ. ರಾಜಕಾರಣಿಗಳು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರ್ತಾರೆ. ಒಬ್ಬ ಮುತ್ಸದ್ಧಿ ಮುಂದಿನ ಜನಾಂಗದ ಮೇಲೆ ಕಣ್ಣು ನೆಟ್ಟಿರ್ತಾನೆ. ಅಂಥ ಮುತ್ಸದ್ಧಿ ರಾಜಕಾರಣಿ ಮೋದಿಯವರು ಎಂದರು.
ಓದಿ:ಕೇಂದ್ರ ತಂಡದ ಕಾಟಾಚಾರದ ನೆರೆ ಅಧ್ಯಯನ : ಅಧಿಕಾರಿಗಳ ವಿರುದ್ಧ ಸಂತ್ರಸ್ತ ಆಕ್ರೋಶ
ಒಬ್ಬ ಜನಪ್ರತಿನಿಧಿಗೆ ತನ್ನ ವಿಚಾರವನ್ನು ಯೋಜನೆ ರೂಪದಲ್ಲಿ ತಂದು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಿಗುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ. ಕೃಷಿ ವಿಶ್ವವಿದ್ಯಾಲಯ ತಮ್ಮ ಕ್ಯಾಂಪಸ್‌ನಲ್ಲಿ ಬೆಳೆದು ತೋರಿಸಿದ್ರೆ ಪ್ರಯೋಜನ ಇಲ್ಲ. ರೈತರ ಹೊಲಗಳಲ್ಲಿ ಯಶಸ್ವಿಯಾಗಿ ಬೆಳೆದು ತೋರಿಸುವ ಕೆಲಸ ಕೃಷಿ ವಿಶ್ವವಿದ್ಯಾಲಯಗಳು ಮಾಡಬೇಕು. ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್‌ನಿಂದ ಹೊರ ಬರಬೇಕು ಎಂದು ಕರೆ ನೀಡಿದರು.
ರೈತರ ಮದುವೆ, ಖಾಯಿಲೆಯಿಂದಾಗಿ ಸಾಲದ ಕೂಪಕ್ಕೆ ಹೋಗ್ತಾರೆ. ಇಂಥ ಸಮಸ್ಯೆ ನೀಗಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಅವರು ಆರ್ಥಿಕವಾಗಿಯೂ ಸದೃಢರಾಗಬೇಕು, ಆರೋಗ್ಯವಂತರಾಗಿರಬೇಕು. ರೈತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ ಸರ್ಕಾರ ರೈತನ ಸಹಾಯಕ್ಕಾಗಿ ಧಾವಿಸಿದೆ ಎಂದು ತಿಳಿಸಿದರು.