ಬೆಂಗಳೂರು:ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹ, ವಿಲೇವಾರಿ ಆರಂಭವಾಗಿದ್ದು, ನಗರದ ಹಲವು ವಾರ್ಡ್ಗಳಲ್ಲಿ ಇಂದೋರ್ನ ಹದಿನೈದು ಅಧಿಕಾರಿಗಳ ತಂಡ ಇದನ್ನು ಪರಿಶೀಲಿಸುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಇಂದೋರ್ ಮಾದರಿಯ ಕಸ ಸಂಗ್ರಹಕ್ಕೆ ಚಾಲನೆ: ಮೇಯರ್ ಗೌತಮ್ ಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಭೆಯ ನಂತರ ಮಾತನಾಡಿದ ಅವರು, ನಗರದ ಮೇಯರ್ ಪ್ರತಿನಿಧಿಸುವ ಜೋಗುಪಾಳ್ಯ ವಾರ್ಡ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ರ ಜಕ್ಕೂರು ವಾರ್ಡ್, ಮನೋರಾಯನಪಾಳ್ಯ ಹಾಗೂ ಕಾವಲ್ ಭೈರಸಂದ್ರ ವಾರ್ಡ್ ಗಳಲ್ಲಿ ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹ, ವಿಲೇವಾರಿ ಆರಂಭವಾಗಿದೆ. ಇಂದೋರ್ನ ಹದಿನೈದು ಅಧಿಕಾರಿಗಳ ತಂಡ ಇದನ್ನು ಪರಿಶೀಲಿಸುತ್ತಿದೆ. ರಾತ್ರಿ ಪಾಳಯದಲ್ಲಿ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ರಾತ್ರಿ ಒಂಬತ್ತು ಗಂಟೆಯಿಂದ ಅಂಗಡಿಗಳಿಂದ ಕಸ ಸಂಗ್ರಹ ಮಾಡಲಾಗ್ತಿದೆ. ಇದರಿಂದ ರಸ್ತೆ ಬದಿ ಕಸ ಎಸೆಯುವುದು ಕಡಿಮೆಯಾಗಲಿದೆ ಎಂದರು.
ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ಸಿದ್ಧರಾಗುವ ಎಪ್ಪತ್ತೆರಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಿಬಿಎಂಪಿ ತರಬೇತಿ ನೀಡಲಿದೆ ಎಂದು ಮೇಯರ್ ತಿಳಿಸಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷಕ್ಕೆ 1 ಲಕ್ಷದ 97 ಸಾವಿರ ದರದಂತೆ ನಾಲ್ಕು ವರ್ಷಕ್ಕೆ ಐದು ಕೋಟಿ 67 ಲಕ್ಷ ರೂ. ವೆಚ್ಚದಲ್ಲಿ 72 ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುವುದು ಎಂದರು.
ಒಂದು ಗಂಟೆ ಸಭೆಗೆ ನಾಲ್ಕು ಲಕ್ಷ ರೂಪಾಯಿ ವೆಚ್ಚ ಮಾಡುತ್ತೆ ಬಿಬಿಎಂಪಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಂಗಳಿಗೊಂದು ಸಭೆ ನಡೆಸುತ್ತದೆ. ಆದರೆ ಅದನ್ನೂ ಪೂರ್ಣಗೊಳಿಸದೆ ಅರ್ಧಕ್ಕೇ ಮುಂದೂಡಲಾಗುತ್ತದೆ. ಈ ಬಾರಿ ಬಿಜೆಪಿ ಆಡಳಿತದಲ್ಲಿ ಹಲವಾರು ಸಭೆಗಳು ಅರ್ಧಕ್ಕೆ ಮುಂದೂಡಲ್ಪಟ್ಟಿದ್ದು, ಲಕ್ಷಾಂತರ ರೂಪಾಯಿ ವ್ಯರ್ಥ ಮಾಡಲಾಗುತ್ತದೆ ಎಂದು ವಿಪಕ್ಷ ದೂರಿದೆ. ಜನರ ತೆರಿಗೆ ಹಣ ಈ ರೀತಿ ಪೋಲು ಮಾಡಲಾಗುತ್ತದೆ. ಖಾಸಗಿಯವರಿಂದ ತರಿಸುವ ಊಟಕ್ಕೆ ಎರಡು ಲಕ್ಷ, ಅಲ್ಲದೇ ಪಾಲಿಕೆ ಸದಸ್ಯರಿಗೆ ಪ್ರತ್ಯೇಕ ನಾಲ್ನೂರು ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಪ್ರತಿ ಪಕ್ಷದ ವಾಜಿದ್ ದೂರಿದ್ದಾರೆ.