ಬೆಂಗಳೂರು:ಜನಸ್ನೇಹಿ ಪೊಲೀಸಿಂಗ್ಗೆ ಮುಂದಾಗಿರುವ ನಗರ ಪೊಲೀಸರು ಈ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಗಳಲ್ಲಿ ಮಾಸಿಕ ಜನಸಂಪರ್ಕ ದಿನವನ್ನಾಗಿ ಆಚರಿಸಲಾಗುತ್ತಿದ್ದು ಇದಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಪ್ರತಿ ತಿಂಗಳ ನಾಲ್ಕನೇ ಶನಿವಾರ ಹಮ್ಮಿಕೊಳ್ಳಲಾಗುವ ಮಾಸಿಕ ಸಂಪರ್ಕ ಅಭಿಯಾನವನ್ನು ಮೊದಲು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಬಾಕಿಯಿರುವ ಪ್ರಕರಣಗಳ ಮಾಹಿತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳ ಕುರಿತಂತೆ ನಾಗರಿಕರು ಬೆಳಕು ಚೆಲ್ಲಿದರು.
ಇದಕ್ಕೂ ಮುನ್ನ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಮಾತನಾಡಿ, ಪೊಲೀಸ್ ಕೆಲಸ ಬಹಳ ಕಷ್ಟದ ಕೆಲಸ, ಸರಿಯಾಗಿ ನಡೆಸಬೇಕಾದರೆ ಜನರ ಸಹಾಯ ಬೇಕೆ ಬೇಕು. ಕಾನೂನು ಪ್ರಕ್ರಿಯೆಯಿಂದ ಅಧಿಕಾರ ನಡೆಸುವುದಕ್ಕೆ ಆಗುವುದಿಲ್ಲ. ಜನರ ಸಹಾಯ ಬಹಳ ಮುಖ್ಯ. ಜನಪರ ಮನೋಭಾವನೆ ಮುಖ್ಯ. ದೂರು ಕೊಟ್ಟ ನಂತರ ಶೇ.90ರಷ್ಟು ಕೇಸ್ಗಳಲ್ಲಿ ತನಿಖೆ ನಡೆಯುತ್ತದೆ. ಶೇ.10 ಕೇಸ್ಗಳು ಕೆಲವು ಕಾರಣಗಳಿಂದ ತನಿಖೆ ಆಗಲ್ಲ ಅದನ್ನು ನಾನು ಒಪ್ಪುತ್ತೇನೆ. ಕಮಲ್ ಪಂತ್ ಬಹಳ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.