ಬೆಂಗಳೂರು: ಜಿ20 ಡಿಜಿಟಲ್ ಇನೋವೇಶನ್ ಅಲೈಯನ್ಸ್ ಶೃಂಗಸಭೆ ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ. ಇದು ಅನೇಕ ದೇಶಗಳಿಗೆ ತಾಂತ್ರಿಕ ಆವಿಷ್ಕಾರವನ್ನು ತೋರಿಸಲು ವೇದಿಕೆಯಾಗಿ ಸೃಷ್ಟಿಯಾಗಿದೆ. ಇಲ್ಲಿ ಸ್ಟಾರ್ಟ್‌ಅಪ್‌ಗಳು ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ನೋಡುತ್ತಿದ್ದೇನೆ. ವೈಜ್ಞಾನಿಕ ಬೆಳವಣಿಗೆಗಳ ಮಾರ್ಗಸೂಚಿಯಾಗಿ ಈ ಶೃಂಗಸಭೆ ಹೊರಹೊಮ್ಮಿದೆ ಎಂದು ಡಿ.ಆರ್.ಡಿ.ಓ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವ್ಯವಸ್ಥೆಗಳ ಮಹಾನಿರ್ದೇಶಕ ಬಿ ಕೆ ದಾಸ್ ಹೇಳಿದರು.
ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್ ಭಾರತದ ಭವಿಷ್ಯವಾಗಿದೆ. ಹೊಸ ಪೀಳಿಗೆಯು ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಭಾರತವನ್ನು ಮುನ್ನಡೆಸಲಿವೆ. ಅವರಿಗೆ ತಾಂತ್ರಿಕ ಸಹಾಯ ಮತ್ತು ಸರಬರಾಜು ಸರಪಳಿಯನ್ನು ಸರಿಪಡಿಸುವುದು ಮುಖ್ಯವಾಗಿದೆ. ವಾಸ್ತವದಲ್ಲಿ ಸ್ಟಾರ್ಟ್ ಅಪ್ಗಳಿಗೆ ಕನಸುಗಳಿವೆ. ಇದರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಇವು ಎಲ್ಲವನ್ನು ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಪೂರೈಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಹೆಚ್ಚಿನ ಸ್ಟಾಲ್‌ಗಳು ಉತ್ತಮ ಐಡಿಯಾಗಳಿಂದ ಕೂಡಿವೆ. ಇದರಲ್ಲಿ ಡಿ.ಆರ್.ಡಿ.ಓ ಸಹ ಉತ್ಪನ್ನಗಳ ಹೊಸ ಶ್ರೇಣಿಯನ್ನು ಪರಿಚಯಿಸಿ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದೆ ಎಂದು ಹೇಳಿದರು.
ಡಿ.ಆರ್.ಡಿ.ಓ ಉತ್ಪನ್ನಗಳು ಸಹ ಸಾಕಷ್ಟು ರಫ್ತು ಸಾಮರ್ಥ್ಯವನ್ನು ಹೊಂದಿವೆ. ನಮ್ಮ ಫೈಟರ್ ಏರ್‌ಕ್ರಾಫ್ಟ್, ಎಲ್.ಸಿ.ಎ, ಇ.ಡಬ್ಲ್ಯೂ ಸಿಸ್ಟಮ್‌ಗಳು, ಫೈಟರ್ ಏರ್‌ಕ್ರಾಫ್ಟ್‌ಗಾಗಿನ ಎಲೆಕ್ಟ್ರಾನಿಕ್ಸ್ ಸ್ಕ್ಯಾನ್ ರೆಡಾರ್, ಎಲೆಕ್ಟ್ರೋಟ್ರಾಪಿಕ್ ಸಿಸ್ಟಮ್ಸ್ ಸಂವಹನ, ಬಯೋಮೆಡಿಕಲ್ ಎಂಜಿನಿಯರಿಂಗ್ ಉಪಕರಣಗಳು, ಆಮ್ಲಜನಕ ವ್ಯವಸ್ಥೆಗಳು, ತಪಸ್ ಯು.ಎ.ವಿಗಳ ಎಲ್ಲ ಸರಣಿಗಳನ್ನು ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಡಿ.ಆರ್.ಡಿ. ಓ ಅಭಿವೃದ್ಧಿಪಡಿಸಿದೆ. ಹಾಗಾಗಿ ನಮ್ಮ ಈ ರಕ್ಷಣಾ ಸಂಶೋಧನಾ ಸಂಸ್ಥೆಯು ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ಜೊತೆಗೆ ಉದ್ಯಮಗಳ ಕೈ ಹಿಡಿಯುವ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.