ಬೆಂಗಳೂರು:ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಔಪಚಾರಿಕವಾಗಿ ರಾಜ್ಯ ಬಿಜೆಪಿ ಶಾಸಕರು ಮತ್ತು ಸಂಸದರ ಬೆಂಬಲ ಕೋರಿದರು. ಪಕ್ಷ ನೀಡಿದ ಅವಕಾಶ ಸ್ಮರಿಸಿದ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಎನ್‌ಡಿಎ ಮತ್ತು ವಿವಿಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಭಾರತೀಯ ಜನತಾ ಪಕ್ಷದ ಶಾಸಕರ ಹಾಗೂ ಸಂಸದರ ಸಭೆಯಲ್ಲಿ ಭಾಗಿಯಾದರು.
ಭಾರತೀಯ ಜನತಾ ಪಕ್ಷದ ಶಾಸಕರ ಹಾಗೂ ಸಂಸದರ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ವಹಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ , ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ ವಿ ಸದಾನಂದ ಗೌಡ ಮತ್ತು ಇತರರು ಭಾಗವಹಿಸಿದ್ದರು.
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ರಾಜ್ಯ ಬಿಜೆಪಿ ವತಿಯಿಂದ ಕೃಷ್ಣನ ವಿಗ್ರಹ ನೀಡಿ ರಾಜ್ಯದ ಸಂಪ್ರದಾಯದಂತೆ ಪೇಟ ತೊಡಿಸಿ ಮುರ್ಮು ಅವರನ್ನು ಗೌರವಿಸಲಾಯಿತು. ನಂತರ ಅವರನ್ನು ಅಭಿನಂದಿಸಿ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು. ರಾಜ್ಯ ಬಿಜೆಪಿ ಅಭಿನಂದನೆ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ಪಕ್ಷ ನೀಡಿದ ಜವಾಬ್ದಾರಿ ಸ್ಮರಿಸಿದರು. ಈಗ ನೀಡುತ್ತಿರುವ ಹೊಸ ಜವಾಬ್ದಾರಿಗೆ ಬೆಂಬಲ ನೀಡುವಂತೆ ರಾಜ್ಯದ ಸಂಸದರು, ಶಾಸಕರಿಗೆ ಮನವಿ ಮಾಡಿದರು.
ದೇವೇಗೌಡರ ಭೇಟಿ: ಸಭೆ ಬಳಿಕ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಲು ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ತೆರಳಿದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬೆಂಬಲ ಪಡೆಯುವ ವಿಚಾರ ಸಂಬಂಧ ದೇವೇಗೌಡರನ್ನು ಭೇಟಿಯಾಗುತ್ತಿದ್ದಾರೆ. ದ್ರೌಪದಿ ಮುರ್ಮು ಜೊತೆಗೆ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ನಳಿನ್ ಕುಮಾರ್ ಕಟೀಲ್ ಸಹ ಮಾಜಿ ಪ್ರಧಾನಿ ಭೇಟಿಯಾಗಲು ತೆರಳಿದ್ದು, ದೇವೇಗೌಡರನ್ನು ಭೇಟಿಯಾದ ಬಳಿಕ ಇಂದೇ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ದೇವೇಗೌಡರ ಪದ್ಮನಾಭ ನಗರ ನಿವಾಸದಿಂದಲೇ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ದ್ರೌಪದಿ ಮುರ್ಮು ಪ್ರಯಾಣಿಸಲಿದ್ದು, ದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಕೊಲೆಗಡುಕರು ಎಂದ ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು