ಕರ್ನಾಟಕ

karnataka

ETV Bharat / state

ಹೆಚ್​​ಡಿಕೆ ತಮ್ಮ ಆರೋಪಕ್ಕೆ ಪುರಾವೆ ಒದಗಿಸಿದರೆ ರಾಜೀನಾಮೆ ಕೊಡುತ್ತೇನೆ: ಸುಧಾಕರ್​​ ಸವಾಲು - dr k sudhakar latest tweet

ಡ್ರಗ್ಸ್​ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಈ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ ಎಂದು ಸವಾಲೆಸೆದಿದ್ದಾರೆ.

Dr Sudhakar
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

By

Published : Sep 1, 2020, 7:32 AM IST

ಬೆಂಗಳೂರು: ಡ್ರಗ್ಸ್​ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್​ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.

ಡ್ರಗ್ಸ್​ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸುಧಾಕರ್​​, "ನಾನು ಯಾವ ಮುಂಬೈಗೂ ಹೋಗಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇಂತಹ ಗಂಭೀರ ಆರೋಪ ಮಾಡುವುದು ಉತ್ತಮವಲ್ಲ. ಒಂದು ವೇಳೆ ಆರೋಪ ಮಾಡಿದರೆ ಅದಕ್ಕೆ ತಕ್ಕ ಪುರಾವೆಯನ್ನೂ ಸಹ ನೀಡಬೇಕು. ಬಿಜೆಪಿ ಎಂದಿಗೂ ಅಂತಹ ಅನೈತಿಕ ಕೆಲಸವನ್ನು ಮಾಡಿಲ್ಲ. ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ. ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ" ಎಂದು ಪ್ರಶ್ನಿಸಿದ್ದಾರೆ.

ನಾನು ಮಾಜಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಮಗನಲ್ಲ. ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿ ಸಚಿವ ಸುಧಾಕರ್ ಸರಣಿ ಟ್ವೀಟ್ ಮಾಡಿದ್ದಾರೆ.

ನಾನು ಕೇಳಿದ್ದು ಡ್ರಗ್ಸ್​ ಮಾಫಿಯಾ ಆರೋಪದ ಹಿನ್ನೆಲೆಗಳ ಬಗ್ಗೆ. ಮಾಜಿ ಮುಖ್ಯಮಂತ್ರಿಗಳಾಗಿ ಡ್ರಗ್ಸ್​ ಮಾಫಿಯಾ ಹಣದಿಂದ ಸರ್ಕಾರ ಬಂದಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಬಿಜೆಪಿ ಅನೈತಿಕ ಕೆಲಸವನ್ನು ಎಂದೂ ಮಾಡಿಲ್ಲ, ಮಾಡುವುದಿಲ್ಲ. ಅದಕ್ಕೆ 2 ಸ್ಥಾನದಿಂದ 303 ಸ್ಥಾನಗಳನ್ನು ಜನ ಆಶೀರ್ವದಿಸಿದ್ದಾರೆ ಎಂದು ಟ್ವೀಟ್ ಮೂಲಕ ಹೆಚ್​ಡಿಕೆಗೆ ಟಾಂಗ್ ನೀಡಿದ್ದಾರೆ.

ಎಲ್ಲರ ಹಿನ್ನೆಲೆಗಳನ್ನೂ ಸಹ ರಾಜ್ಯದ ಜನರು ಗ್ರಹಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಯಾವ್ಯಾವ ನಾಯಕರಿಗೆ, ಏನೇನು ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದ್ದೀರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಮ್​​ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನೆಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ, ಒಮ್ಮೆ ಕೇಳಿಸಿಕೊಳ್ಳಿ. ಸರ್ಕಾರದ ವಿರುದ್ಧ ತಮ್ಮ ಆರೋಪಗಳಿಗೆ ಪುರಾವೆ ನೀಡಿ. ನಾನು ಸರ್ಕಾರದ ಸಚಿವನಾಗಿ, ತಾವು ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡಿದರೆ ಅದಕ್ಕೆ ಪುರಾವೆ ಕೇಳುವುದು ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಹೇಗಾದೀತು ಎಂದು ಪ್ರಶ್ನಿಸಿದ್ದಾರೆ. ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ, ತನಗಾದ ಆಗೇನು ಅವರಿಗಾದ ಚೇಗೆಯೇನು, ತನುವಿನ ಕೋಪ ತನ್ನ ಹಿರಿಯತನದ ಕೇಡು ಮನದ ಕೋಪ ತನ್ನರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೇ ನೆರೆಮನೆಯ ಸುಡದೋ ಕೂಡಲಸಂಗಮದೇವ ಎಂದು ವಚನದ ಸಾಲುಗಳನ್ನು ಉಲ್ಲೇಖಿಸಿ ಕುಮಾರಸ್ವಾಮಿ ವಿರುದ್ಧ ಸುಧಾಕರ್ ಟ್ವೀಟ್​​ ದಾಳಿ ನಡೆಸಿದ್ದಾರೆ.

ABOUT THE AUTHOR

...view details