ಬೆಂಗಳೂರು :ಕೋವಿಡ್ ಸೋಂಕಿನಿಂದ ಗುಣಮುಖರಾದವರೆಲ್ಲರೂ ಕ್ಷಯರೋಗಲಕ್ಷಣ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಬಂದಿರೋರೆಲ್ಲಾ ಕ್ಷಯ ರೋಗಿಗಳು ಅಂತಲ್ಲ. ಮೊದಲೇ ತಪಾಸಣೆ ಮಾಡಿಸಿಕೊಂಡ್ರೆ ಅದನ್ನ ಆರಂಭದಲ್ಲೇ ತಡೆಯಬಹುದು. ಶೇ.3.9ರಷ್ಟು ಜನರಿಗೆ ಕ್ಷಯ ರೋಗವಿತ್ತು.
2019-20ರಲ್ಲಿ ತಪಾಸಣೆ ಮಾಡಿದಾಗ ಕಡಿಮೆಯಾಗಿದೆ. ಕೋವಿಡ್ ಬಂದ ಹಿನ್ನೆಲೆ ತಪಾಸಣೆ ಕಡಿಮೆ ಮಾಡಲಾಗಿತ್ತು. 1.25ಕೋಟಿ ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. 79,938 ಜನರ ಪೈಕಿ, 2,714 ಜನರಿಗೆ ಪಾಸಿಟಿವ್ ಬಂದಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಇದನ್ನು ಸಾಂಕ್ರಾಮಿಕ ರೋಗ ಅಂತಾ ಹೇಳಲು ಸಾಧ್ಯವಿಲ್ಲ. ಆದ್ರೆ, ವ್ಯಕ್ತಿ ಇಂದ ಮನೆಯವರಿಗೆ ಬರುವ ಸಾಧ್ಯತೆ ಇದೆ. ಕೆಲಸ ಮಾಡುವ ಸ್ಥಳದಿಂದಲೂ ಬರುವ ಸಾಧ್ಯತೆ ಇದೆ. ಯಾರು ಎರಡು ವಾರಕ್ಕೂ ಹೆಚ್ಚು ಸಮಯ ಕೆಮ್ಮುತ್ತಾರೆಯೋ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮಿದ್ದರೆ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ರಾತ್ರಿ ವೇಳೆ ಜ್ವರ ಬರುವ ಸಾಧ್ಯತೆ ಇದೆ. ತೂಕ ಕೂಡ ಕಡಿಮೆಯಾಗಲಿದೆ ಎಂದು ವಿವರಿಸಿದರು.
ದೇಶದಲ್ಲೇ ಕರ್ನಾಟಕ ಸರ್ಕಾರ ವಿನೂತನ ಪ್ರಯತ್ನ ಮಾಡುತ್ತಿದೆ. ಕೋವಿಡ್ ಬಂದವರಿಂದ ಕ್ಷಯ ಪತ್ತೆ ಹಚ್ಚಬೇಕಿದೆ. ಇದೇ ಆ.14ರಿಂದ 30ರವರೆಗೂ ತಪಾಸಣೆ ನಡೆಯಲಿದೆ. 28 ಲಕ್ಷ ಜನ ಇದರಿಂದ ಗುಣಮುಖರಾಗಿದ್ದಾರೆ. ಕೋವಿಡ್ನಲ್ಲಿ ಕಪ್ಪು ಶಿಲೀಂಧ್ರಗಳ ಪತ್ತೆ ಮಾಡುವ ತಪಾಸಣೆ ನಡೆಯುತ್ತಿದೆ. ಅದೇ ಮಾದರಿಯಲ್ಲಿ ಕ್ಷಯರೋಗ ಪತ್ತೆ ಮಾಡಲಾಗುವುದು ಎಂದರು.
ಶ್ವಾಸಕೋಶ ಸೋಂಕಿನಿಂದ ಕ್ಷಯ ರೋಗ ಬರುತ್ತದೆ. ಕಳೆದ ಐದು ವರ್ಷದಿಂದ ಈ ರೋಗ ಹೆಚ್ಚಾಗಿದೆ. ಶೇ.33ರಷ್ಟು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈವರೆಗೂ ನಾವು ಯಾವ್ಯಾವ ವೃತ್ತಿಯಲ್ಲಿ ಹೆಚ್ಚು ಬರಲಿದೆ ಅಂತಾ ತಪಾಸಣೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಗಳ ಪ್ರಕಾರವೂ ಸರ್ವೇ, ತಪಾಸಣೆ ಮಾಡಲಾಗಿದೆ. ಇದರ ಜೊತೆಯಲ್ಲಿ ಕೋವಿಡ್ ಬಂದವರಲ್ಲೂ ತಪಾಸಣೆ ಮಾಡಲಾಗ್ತಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಇದನ್ನ ಮಾಡಲಾಗ್ತಿದೆ ಎಂದು ತಿಳಿಸಿದರು.