ಬೆಂಗಳೂರು : ಗಣರಾಜ್ಯೋತ್ಸವಕ್ಕೆೆ ಜನವರಿ 18 ರಿಂದ ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ವರ್ಷ ಬಸವಣ್ಣನವರ ಜೀವನಾಧಾರಿತ ವಚನ ಪರಿಕಲ್ಪನೆಯ ಥೀಮ್ನಲ್ಲಿ ಫ್ಲವರ್ ಶೋ ಮೂಡಿ ಬರಲಿದೆ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಅವರು ಹೇಳಿದರು.
ಮಂಗಳವಾರ ಲಾಲ್ಬಾಗ್ನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಾಲ್ಬಾಗ್ ಫ್ಲವರ್ ಶೋ ಜನವರಿ 18 ರಿಂದ 28ರವರೆಗೆ ನಡೆಯಲಿದೆ. ಜನವರಿ 18 ರ ಸಂಜೆ 6 ಗಂಟೆಗೆ ಲಾಲ್ ಬಾಗಿನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ರಾಮಲಿಂಗಾರೆಡ್ಡಿ, ನಾಡೋಜ ಡಾ.ಗೊ.ರು ಚನ್ನಬಸಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಗಾಜಿನ ಮನೆಯ ಪ್ರವೇಶದಲ್ಲಿ ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂಜೋಡಣೆ ಮತ್ತು ಎದೆ ಮಟ್ಟದ ಬಸವಣ್ಣನವರ ಪುತ್ಥಳಿ ಇರಲಿದೆ. ಕೇಂದ್ರ ಭಾಗದಲ್ಲಿ ಅನುಭವ ಮಂಟಪದ ಪುಷ್ಪ ಮಾದರಿ ಇರಲಿದೆ. ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಗಂಗಾಂಬಿಕೆ, ನೀಲಾಂಬಿಕೆ ಮತ್ತಿತರ ವಚನಕಾರರ ಪ್ರತಿಮೆಗಳು, ಅವರ ವಚನಗಳು ಮತ್ತು ವಚನಕಾರರ ಅಂಕಿತ ನಾಮಗಳು ಹೀಗೆ ಸಮಗ್ರ ವಚನ ಸಾಹಿತ್ಯವೇ ಫಲಪುಷ್ಪ ಪ್ರದರ್ಶನದಲ್ಲಿರಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜ್ಞಾನದ ಕಣಜವಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದರೆ, ನೋಡುಗರಿಗೆ ಜ್ಞಾನದ ಅರಿವಿನ ತಾಣವಾಗಲಿದೆ ಎಂದು ಉಲ್ಲೇಖಿಸಿದರು.
ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಪುಷ್ಪ ಪ್ರದರ್ಶನಕ್ಕೆೆ ವಿಧಾನಸೌಧದ ಪ್ರತಿಕೃತಿಯನ್ನು ಸುಮಾರು 8 ಲಕ್ಷದಷ್ಟು ಜನರು ವೀಕ್ಷಿಸಿದ್ದರು. 3 ಕೋಟಿಗೂ ಅಧಿಕ ಆದಾಯ ತೋಟಗಾರಿಕೆ ಇಲಾಖೆಗೆ ಹರಿದುಬಂದಿತ್ತು. ಈ ಬಾರಿ ಬಸವಣ್ಣನವರು ಹುಟ್ಟಿ ಬೆಳೆದು ಬಂದ ಹಾದಿಯನ್ನು ಪ್ರತಿಕೃತಿಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದು, ಆದ್ದರಿಂದ 10 ಲಕ್ಷಕ್ಕೂ ಅಧಿಕ ಸಂಖ್ಯೆೆಯಲ್ಲಿ ಜನರನ್ನು ನಿರೀಕ್ಷಿಸಲಾಗುತ್ತಿದೆ. ಒಟ್ಟು 11 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆೆ ಆಗಮಿಸುವವರಿಗಾಗಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ವಾರದ ದಿನಗಳಲ್ಲಿ 80 ರೂ, ವಾರಾಂತ್ಯದಲ್ಲಿ 100 ರೂ ನಿಗದಿಗೊಳಿಸಲಾಗಿದೆ. ಮಕ್ಕಳಿಗೆ 30 ರೂ ಟಿಕೆಟ್ ದರ ಇರಲಿದೆ. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ ಎಂದು ಮಾಹಿತಿ ನೀಡಿದರು.
ಪುಷ್ಪ ಪ್ರದರ್ಶನದ ಅಲಂಕಾರಕ್ಕಾಗಿ 12 ರಿಂದ 15 ಲಕ್ಷದಷ್ಟು ಹೂಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ವಾರ್ಷಿಕವಾಗಿ ಬೆಳೆಯಲಾಗುವ ಹೂಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 8 ಲಕ್ಷದಷ್ಟು ಹೂಗಳನ್ನು ಹೊರ ರಾಜ್ಯಗಳಾದ ಊಟಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಿಂದ ತರಿಸಲಾಗಿದೆ. ಒಟ್ಟು 200 ತಳಿಯ ಹಾಗೂ 25 ಬಗೆಯ ವರ್ಣರಂಜಿತ ಹೂಗಳನ್ನು ಬಳಸಿಕೊಂಡು ಅಲಂಕರಿಸಲಾಗುತ್ತಿದೆ ಎಂದು ಹೇಳಿದರು.