ಬೆಂಗಳೂರು:ಜನಸಂಘದ ಸಂಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 119ನೇ ಜನ್ಮ ದಿನಾಚರಣೆಯನ್ನು ಬಿಜೆಪಿ ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನದ ಪ್ರಯುಕ್ತ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೊರೊನಾ ಹಿನ್ನೆಲೆ ಸರಳವಾಗಿ ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪಶ್ಚಿಮ ಬಂಗಾಳದ ಬಡ ಕುಟುಂಬದಲ್ಲಿ ಜನಿಸಿದ ಶಾಮ್ ಪ್ರಸಾದ್ ಮುಖರ್ಜಿಯವರ ತಂದೆ 36ನೇ ವಯಸ್ಸಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಮುಖರ್ಜಿಯವರು ಜನ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು ಎಂದರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 119 ನೇ ಜನ್ಮದಿನಾಚರಣೆ ಜವಾಹರ್ ಲಾಲ್ ನೆಹರು ಸಂಪುಟದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ದೇಶಾದ್ಯಂತ ಚರ್ಚೆಯಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ನೆಹರು ಲಿಯಾಖತ್ ಪ್ಯಾಕ್ಟ್ ವಿರೋಧಿಸಿ ನೆಹರು ಮಂತ್ರಿ ಮಂಡಲಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಂವಿಧಾನದ 370ನೇ ವಿಧಿ ರದ್ದತಿಗೋಸ್ಕರ ದೇಶಾದ್ಯಂತ ದೊಡ್ಡಮಟ್ಟದ ಆಂದೋಲನ ಆಯೋಜಿಸಿದ್ದರು ಎಂದು ಅವರ ಹೋರಾಟವನ್ನು ಸ್ಮರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ನಾಯಕರು ಟ್ವೀಟ್ ಮೂಲಕ ಮುಖರ್ಜಿ ಅವರ ಕೊಡುಗೆ ಸ್ಮರಿಸಿದ್ದಾರೆ.