ಬೆಂಗಳೂರು : ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಭಾವವನ್ನು ತರಲು ಸಾಧ್ಯ, ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯವನ್ನು ಸಾಧಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಾ. ಎಲ್.ಶಿವಲಿಂಗಯ್ಯನವರ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಗರದಲ್ಲಿ ನಿವೃತ್ತ ಇಂಜಿನಿಯರ್ ಇನ್ ಚೀಫ್ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡಾ. ಎಲ್.ಶಿವಲಿಂಗಯ್ಯನವರ ‘ನುಡಿ-ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ. ಎಲ್.ಶಿವಲಿಂಗಯ್ಯ ಅವರ ಮನೆಗೆ ತೆರಳಿ ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ಮತ್ತು ನಮ್ಮ ತಂದೆಯವರ ಒಡನಾಟ, ಆತ್ಮೀಯತೆ ಮತ್ತು ರಾಜ್ಯ ಪ್ರಗತಿಪಥದಲ್ಲಿ ಹೇಗೆ ನಡೆಯಿತು ಎಂಬ ಬಗ್ಗೆ ಅತ್ಯಂತ ರೋಚಕವಾಗಿ ತಿಳಿಯಪಡಿಸುತ್ತಿದ್ದರು. ಉನ್ನತ ಚಿಂತನೆಯ ವ್ಯಕ್ತಿತ್ವ ಅವರದು. ಹಲವಾರು ನೀರಾವರಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಮ್ಮ ನಾಡಿನ ಮಹನೀಯರ ಸ್ಮರಣೆ ಮಾಡಿದಾಗ ಮಾತ್ರ ನಮಗೆ ಪ್ರೇರಣೆ ದೊರೆಯುತ್ತದೆ ಎಂದರು.
ಎಲ್ಲರೊಂದಿಗೆ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ: ಸಿಎಂ ಬೊಮ್ಮಾಯಿ ಬೆಂಗಳೂರಿನಲ್ಲಿ ವಿಕ್ಟೋರಿಯಾ, ನಿಮಾನ್ಸ್ ಸೇರಿದಂತೆ ಹಲವು ಆಸ್ಪತ್ರೆಗಳ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಶಿವಲಿಂಗಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಡಾ.ಬಿ.ಆರ್. ಅಂಬೇಡ್ಕರ್ ಸಂಸ್ಥೆಗಳು ಅವರ ದೂರದೃಷ್ಟಿಯ ಫಲವಾಗಿದೆ. ಅವರ ಹಾದಿಯಲ್ಲಿ ನಡೆದು ಕೆಲಸ ಮಾಡಿದಾಗ ಮಾತ್ರ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ. ಎಲ್.ಶಿವಲಿಂಗಯ್ಯ ಅವರು ಯುವಕರಿಗೆ ಪ್ರೇರಣೆ : ಡಾ. ಎಲ್.ಶಿವಲಿಂಗಯ್ಯ ಅವರು ಶ್ರಮಜೀವಿಗಳಾಗಿದ್ದರು. ಅತ್ಯಂತ ಕ್ರಿಯಾಶೀಲರಾಗಿದ್ದ ಅವರು ಯುವಕರಿಗೆ ಪ್ರೇರಣಾದಾಯಿಯಾಗಿದ್ದರು. ಇವರು ಭಾರತೀಯ ಜನತಾ ಪಕ್ಷದ ದಲಿತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಡಾ. ಎಲ್.ಶಿವಲಿಂಗಯ್ಯ ಅವರ ಕಾರ್ಯಸಾಧನೆಗಳನ್ನು ಯುವಪೀಳಿಗೆಗೆ ಪ್ರಚುರಪಡಿಸುವ ಉದ್ದೇಶದಿಂದ ಅವರ ಸುಪುತ್ರರಾದ ಡಾ.ರವಿಪ್ರಕಾಶ್ ಅವರು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಹೇಳಿದರು.
ಮಗುವಿನ ಮುಗ್ಧತೆಯ ಡಾ.ಎಲ್.ಶಿವಲಿಂಗಯ್ಯ :ಮನುಷ್ಯನಿಗೆ ತನ್ನ ಜೀವನದ ಉದ್ದೇಶ ಸರಿಯಾಗಿ ಅರಿತಿದ್ದರೆ ಒಂದು ಸಂಸ್ಥೆಯಾಗಿ ಬೆಳೆಯಬಲ್ಲ ಎಂಬುದನ್ನು ಡಾ. ಎಲ್.ಶಿವಲಿಂಗಯ್ಯ ಅವರು ನಿರೂಪಿಸಿದ್ದಾರೆ. ನಾವು ಬದುಕನ್ನು ನಿಭಾಯಿಸುವ ರೀತಿ ಬಹಳ ಮುಖ್ಯವಾಗುತ್ತದೆ. ಅಂತೆಯೇ ಇವರು ಮಗುವಿನ ಮುಗ್ಧತೆ ಹಾಗೂ ಆತ್ಮಸಾಕ್ಷಿಯನ್ನು ಕಾಯ್ದುಕೊಂಡು ಜೀವನ ನಡೆಸಿದವರು. ನಮ್ಮ ದೇಶಕ್ಕೆ ದೊಡ್ಡ ಚರಿತ್ರೆ ಇದ್ದು, ಚಾರಿತ್ರ್ಯವನ್ನು ಬೆಳೆಸಬೇಕಿದೆ. ಒಳ್ಳೆಯದನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಾವಿನ ನಂತರವೂ ಬದುಕಿದ ಸಾಧಕ : ಪೂಜ್ಯ ಬಸವಣ್ಣ, ಬುದ್ಧರ ಕಾಲದಲ್ಲಿ ನೈಸರ್ಗಿಕ ಕಾನೂನಿತ್ತು. ನೈಸರ್ಗಿಕ ಕಾನೂನು ಎಲ್ಲರನ್ನು ಪ್ರೀತಿಸುವುದನ್ನು ಹಾಗೂ ಗೌರವಿಸುವುದನ್ನು , ಸತ್ಯ , ಧರ್ಮಗಳ ಹಾದಿಯಲ್ಲಿ ನಡೆಯುವುದನ್ನು ಬೋಧಿಸುತ್ತಿತ್ತು. ಮಾನವ ನಿರ್ಮಿತ ಕಾನೂನು ಇತರರಲ್ಲಿ ದ್ವೇಷ, ಅಸತ್ಯ, ಅಧರ್ಮ ತೋರಿದರೆ ಶಿಕ್ಷೆ ಎಂದು ತಿಳಿಸುತ್ತದೆ. ನೈಸರ್ಗಿಕ ಕಾನೂನು ಪುರಸ್ಕಾರಕ್ಕೆ ಪೂರಕವಾಗಿದ್ದರೆ, ಮಾನವ ನಿರ್ಮಿತ ಕಾನೂನು ಶಿಕ್ಷೆಗೆ ಪೂರಕವಾಗಿದೆ. ಆದ್ದರಿಂದ ನಮ್ಮಲ್ಲಿ ಸತ್ಚಾರಿತ್ರ್ಯವನ್ನು ಬೆಳೆಸಿಕೊಂಡಾಗ ಇವೆರಡೂ ಕಾನೂನಿನಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. ಆಗ ಮಾತ್ರ ಜೀವನ ನಡೆಸಲು ಉತ್ತಮ ವಾತಾವರಣವನ್ನು ಸೃಜಿಸಿದಂತಾಗುತ್ತದೆ. ನಮ್ಮ ನಡುವೆಯೇ ಇದ್ದು, ಸಾಧನೆಗೈದಿರುವ ಡಾ. ಎಲ್.ಶಿವಲಿಂಗಯ್ಯ ಅವರ ಜೀವನಸಾಧನೆಗಳು ಎಲ್ಲರಿಗೂ ಸದಾ ಪ್ರೇರಣೆ ನೀಡುತ್ತದೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರ ಬದುಕುವವರು ಸಾಧಕ ಎಂಬ ಮಾತಿಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಓದಿ :ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ಕುಮಾರಧಾರ ನದಿ : ಹಲವೆಡೆ ರಸ್ತೆ ಸಂಪರ್ಕ ಕಡಿತ