ಬೆಂಗಳೂರು: ರಾಜ್ಯದಿಂದ ಪ್ರಧಾನಿ ಮೋದಿ ಅವರಿಗೆ ಆಮ್ಲಜನಕ ಪೂರೈಕೆ ಮತ್ತು ರಮ್‌ಡೆಸಿವಿರ್ ಸರಬರಾಜು ಬೇಡಿಕೆ ಇರಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅದೇ ರೀತಿ ನಮ್ಮ ಹೋಂ ಐಸೋಲೇಷನ್ ವ್ಯವಸ್ಥೆ ಗಟ್ಟಿಗೊಳಿಸಿಕೊಳ್ಳುವಂತೆ ರಾಜ್ಯಕ್ಕೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಿಎಂ ಮೋದಿ ಜೊತೆಗಿನ ವಿಡಿಯೋ ಸಂವಾದ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸ್ಥಿತಿಗತಿ, ನಿಯಂತ್ರಣ ಕುರಿತು ಪ್ರಧಾನಿ ಚರ್ಚೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ಮೊದಲ ಅಲೆ ವೈರಾಣು ರೂಪಾಂತರಗೊಂಡಿದೆ. ಹಾಗಾಗಿ ಮೂರು ಪಟ್ಟು ವೇಗದ ಹರಡುವಿಕೆ ಕಂಡುಬಂದಿದೆ. ವಯೋಮಿತಿ ಕೂಡ ಬದಲಾಗಿದೆ. ಕಳೆದ ಬಾರಿ ಹಿರಿಯ ನಾಗರಿಕರಿಗೆ ಬರುತ್ತಿತ್ತು. ಆದರೆ ಈಗ ಮಧ್ಯ ವಯಸ್ಕರಿಗೂ ತಗುಲುತ್ತಿದೆ. ಈ ವೈರಾಣು ವಿರುದ್ಧ ಗೆಲ್ಲಲು ಹೋಂ ಐಸೊಲೇಷನ್ ಗಟ್ಟಿಯಾಗಬೇಕು. ಶೆ. 90ರಷ್ಟು ಜನಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ಎಲ್ಲರೂ ಆಸ್ಪತ್ರೆಗೆ ದೌಡಾಯಿಸುತ್ತಿರುವ ಕಾರಣ ವೈದ್ಯಕೀಯ ಸಿಬ್ಬಂದಿಗೆ ಕಷ್ಟವಾಗಿದೆ. ಆಸ್ಪತ್ರೆ ಮೇಲೆ ಹೊರೆಯಾಗುತ್ತಿದೆ. ಹಾಗಾಗಿ ನಿಮ್ಮ ಹೋಂ ಐಸೊಲೇಷನ್ ವ್ಯವಸ್ಥೆ ಗಟ್ಟಿ ಮಾಡಿಕೊಳ್ಳಿ. ಟೆಲಿಕಾಲಿಂಗ್ ಮೂಲಕ ಉಪಚಾರ ನೀಡಿ, ಚಿಕಿತ್ಸೆ ನೀಡಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.
ರಾಜ್ಯದ ಪರವಾಗಿ ಮುಖ್ಯಮಂತ್ರಿಗಳು ಎರಡು ಪ್ರಮುಖ ಬೇಡಿಕೆ ಇರಿಸಿದ್ದಾರೆ. ಈ ತಿಂಗಳ ಕೊನೆವರೆಗೂ ಸಾವಿರ ಟನ್ ಆಮ್ಲಜನಕ ಪೂರೈಕೆ ಮಾಡಬೇಕು. ಮೇ. 1ರಿಂದ 1,500 ಮೆಟ್ರಿಕ್ ಟನ್ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಎರಡನೇಯದಾಗಿ ರಮ್‌ಡೆಸಿವಿರ್ ನಮ್ಮ ರಾಜ್ಯದಲ್ಲೇ ಉತ್ಪಾದನೆ ಆದರೂ ಕೂಡ ಅದು ಸಾಲುತ್ತಿಲ್ಲ. ಹಾಗಾಗಿ ತಕ್ಷಣ 2 ಲಕ್ಷ ವಯಲ್ ಕಳಿಸಿಕೊಡಲು ಬೇಡಿಕೆ ಇರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ಬೇಡಿಕೆ ಮತ್ತು ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಸಮಗ್ರವಾಗಿ ಪ್ರಧಾನಿ ಮೋದಿಗೆ ಹೇಳಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಕಠಿಣ ಮಾರ್ಗಸೂಚಿ ಕುರಿತು ಎಲ್ಲ ವಿವರ ನೀಡಿದ್ದು, ನಾಲ್ಕೈದು ದಿನದಲ್ಲಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.