ಬೆಂಗಳೂರು:ಲಸಿಕೆಯೊಂದರಿಂದಲೇ ಕೊರೊನಾ ಸೋಂಕಿನಿಂದ ದೂರವಿರಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ರಾಜ್ಯ ವಕೀಲರ ಪರಿಷತ್ತಿನಲ್ಲಿ ಕೋವಿಡ್-19 ಉಚಿತ ಲಸಿಕಾಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕದ ಸಮಸ್ತ ಜನರಿಗೆ ಲಸಿಕೆಯ ಎರಡೂ ಡೋಸ್ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಲಸಿಕೆಯೊಂದರಿಂದಲೇ ನಾವು ಕೊರೊನಾದಿಂದ ದೂರವಿರಲು ಸಾಧ್ಯ. ಇಲ್ಲದಿದ್ದರೆ ಯಾವಾಗಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾಗುತ್ತದೆ. ಮಾಸ್ಕ್ ಬಿಟ್ಟು ಮುಕ್ತವಾಗಿ ಮೊದಲಿನಂತೆ ಇರುವ ಸ್ಥಿತಿ ಬರಲು ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
ಕೋವಿಡ್ ಎರಡನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಸೋಂಕು ಹೆಚ್ಚಿದ್ದರೂ, ಸರ್ಕಾರದ ಕ್ರಮಗಳಿಂದ ಸಾವಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಸೋಂಕು ನಿಯಂತ್ರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲೇ ವೈದ್ಯರ ನೇರ ನೇಮಕ ಆಗಿರಲಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೂ ಖಾಲಿ ಇರುವ 1,760 ವೈದ್ಯ, ವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲಾಗಿದೆ. ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ. ದೇವಿಶೆಟ್ಟಿ ಸಮಿತಿ ನೀಡಿದ ವರದಿಯ ಶಿಫಾರಸ್ಸು ಆಧರಿಸಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸೌಕರ್ಯವನ್ನು ಬಲಪಡಿಸಲಾಗುತ್ತಿದೆ ಎಂದರು.