ಬೆಂಗಳೂರು: ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರೊಂದಿಗೆ ಇಂದು ವಿಡಿಯೋ ಸಂವಾದ ನಡೆಸಿದರು.
ಸಾಂಕ್ರಮಿಕ ಕೊರೊನಾ ಸೋಂಕನ್ನು ಹೇಗೆ ಪರಿಣಾಮಕಾರಿಯಾಗಿ ನಿಯಂತ್ರಿಸಲಾಯಿತು ಎಂದು ತಿಳಿಯಲು ವಿಡಿಯೋ ಸಂವಾದ ನಡೆಸಿದ್ದು, ಸಂವಾದದಲ್ಲಿ ರೋಗದ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಕೈಗೊಂಡ ಕ್ರಮಗಳು, ಫಲಿತಾಂಶ ಮತ್ತು ಸವಾಲುಗಳನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಂವಾದದಲ್ಲಿ ಮಾತನಾಡಿದ ಶೈಲಜಾ, ಕೋವಿಡ್-19ಅನ್ನು ನಿರ್ವಹಿಸಲು ಕೇರಳ ಸರ್ಕಾರದಿಂದ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ವುಹಾನ್‌ನಿಂದ ಹಿಂದಿರುಗಿದ ಕೂಡಲೇ ವೈರಸ್ ಹರಡುವುದನ್ನು ತಡೆಯಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಕೇರಳವು ತಾಲೂಕು ಮಟ್ಟದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ. ಇದರಿಂದಾಗಿ ಸೋಂಕನ್ನು ತಡೆಗಟ್ಟುವುದು ಮತ್ತು ವಿವಿಧ ಹಂತಗಳಲ್ಲಿ ಚಿಕಿತ್ಸೆ ನೀಡುವುದು ಸುಲಭವಾಯಿತು. ಇದರಿಂದಾಗಿ ನಮ್ಮ ರಾಜ್ಯದಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಅಲ್ಲದೇ ಸಂವಾದದಲ್ಲಿ ಎರಡೂ ರಾಜ್ಯಗಳ ಸಚಿವರು ಉತ್ತಮ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುವಲ್ಲಿ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.
ಉಸಿರಾಟದ ಕಾಯಿಲೆ ಇರುವ ರೋಗಿಗಳ ಕ್ವಾರಂಟೈನ್, ರಕ್ತ ಪರೀಕ್ಷೆ ಮತ್ತು ಚಿಕಿತ್ಸೆಯ ವಿಧಾನ, ವೈರಸ್ ವಿರುದ್ಧ ಹೋರಾಡಲು ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕ ತಡೆ ಮತ್ತು ಇತರ ವಿಷಯಗಳ ಬಗ್ಗೆ ಸಂವಾದದಲ್ಲಿ ಚರ್ಚಿಸಲಾಯಿತು.