ಬೆಂಗಳೂರು :ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಆಧುನಿಕ ವೈದ್ಯಕೀಯ ವೃತ್ತಿಗೆ ತಂದೊಡ್ಡಿರುವ ಸಂಕಷ್ಟ ವಿರೋಧಿಸಿ ಕಳೆದ ಐದು ದಿನಗಳಿಂದ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಇಂದು ಕೊನೆಯ ದಿನಕ್ಕೆ ಕಾಲಿಟ್ಟಿದೆ.
ಓದಿ: ಬಾಂಬ್ ತಯಾರಿ ತರಬೇತಿ ವೇಳೆ ಐಇಡಿ ಸ್ಫೋಟ: 30 ಅಫ್ಘನ್ ಉಗ್ರರು ಬಲಿ
ಕೇಂದ್ರದಿಂದ ಹೋರಾಟಕ್ಕೆ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಅಲ್ಲದೇ ನ್ಯಾಯಾಲಯದಲ್ಲಿ ಈ ಸಂಬಂಧ ಪ್ರಕರಣವಿದ್ದು, ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯುತ್ತಿದ್ದರೂ ಸಹ ಈ ಹೋರಾಟ ಇಲ್ಲಿಗೆ ನಿಲ್ಲುತ್ತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆ ಹಿಂಪಡೆಯಲು ಒತ್ತಾಯಿಸಿ, BDS KNIADVL ಮತ್ತು ACSI ಸಹಭಾಗಿತ್ವದಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರದ ನಿಯಮ ತಿರಸ್ಕರಿಸಿದ್ದಾರೆ.
ಭಾರತೀಯ ಚರ್ಮ ರೋಗ ತಜ್ಞರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಜಯದೇವ ಬೇಟಕೆರೂರ್ ಮಾತನಾಡಿ, ವೈದ್ಯಕೀಯ ಪದ್ಧತಿಗಳು ಬೇರೆ ಬೇರೆ ಆಗಿದ್ದರೂ ಅವುಗಳ ಗುರಿ ರೋಗಿಗಳನ್ನು ಗುಣಪಡಿಸುವುದಾಗಿರುತ್ತದೆ. ವಿವಿಧ ವೈದ್ಯಕೀಯ ಪದ್ಧತಿಗಳು ಇದ್ದು, ಈ ಎಲ್ಲಾ ವೈದ್ಯಕೀಯ ಪದ್ಧತಿಗಳು ತಮ್ಮದೇ ಆದ ವೈಜ್ಞಾನಿಕ ತಳಹದಿ ಹೊಂದಿರುತ್ತದೆ.
ಅಲ್ಲದೇ ರೋಗಿಗೆ ತನಗೆ ಬೇಕಾದ ವೈದ್ಯಕೀಯ ಪದ್ಧತಿ ಆಯ್ಕೆಯ ಹಕ್ಕು ನೀಡಲಾಗಿದೆ. ಆದರೆ, ಸರ್ಕಾರದ ಕೆಲ ನಿರ್ಣಯಗಳು ಈ ಬುನಾದಿಯನ್ನೇ ಅಲ್ಲಾಡಿಸಿ ರೋಗಿಗಳಿಗೆ ಆರಿಸುವ ಹಕ್ಕನ್ನೇ ಕಸಿದುಕೊಳ್ಳುತ್ತದೆ. ಈ ತರಹದ ಬೆರಸುವಿಕೆಯಿಂದ ಅರೆನುರಿತ ವೈದ್ಯರುಗಳ ಸಂಖ್ಯೆ ಜಾಸ್ತಿಯಾಗುತ್ತದೆ.
ಎಲ್ಲ ವೈದ್ಯ ಪದ್ಧತಿಗಳನ್ನು ಬೆರಸುವ ಸರ್ಕಾರದ ನಿರ್ಣಯ ನಮ್ಮ ದೇಶದ ಆರೋಗ್ಯ ಸೇವೆಗೆ ಬಹಳ ಹಾನಿಕಾರಕ ಮತ್ತು ರೋಗಿಗಳ ಜೀವಕ್ಕೆ ಅಪಾಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭಾರತೀಯ ಚರ್ಮ ರೋಗ ತಜ್ಞರ ಸಂಘ ಈ ತರಹದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ವೈದ್ಯ ಸಂಘದ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಹೇಳಿದರು.
ಪ್ರಸ್ತಾಪಿತ ಬದಲಾವಣೆಗಳು ಭಾರತದ ಶ್ರದ್ಧೆಯಿಂದ ನಿರ್ಮಿಸಲಾದ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದು, ಔಷಧಿಗಳ ವಿಭಿನ್ನ ವ್ಯವಸ್ಥೆಗಳನ್ನು ವಿಭಿನ್ನ ತತ್ವಗಳ ಮೇಲೆ ನಿರ್ಮಿಸಲಾಗಿದೆ. ಅವುಗಳನ್ನು ಪ್ರತ್ಯೇಕವಾಗಿ ಇಡುವುದರಿಂದ ರೋಗಿಗಳು ತಾವು ಬಯಸುವ ಯಾವ ವ್ಯವಸ್ಥೆಯನ್ನು ಆಯ್ಕೆ ಮಾಡುವ ಹಕ್ಕನ್ನು ನೀಡುತ್ತದೆ. ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ ಬದಲಾಯಿಸುವುದು ಸುಲಭವಾಗುತ್ತದೆ.
ಅವುಗಳನ್ನು ಸಂಯೋಜಿಸಿದಾಗ ಇದು ಲಭ್ಯವಿಲ್ಲ. ವಿಭಿನ್ನ ವ್ಯವಸ್ಥೆಗಳನ್ನು ಬೆರೆಸುವ ಅಲ್ಪಾವಧಿಯ ಲಾಭಗಳು ಉತ್ತಮವಾಗಿ ಕಾಣಿಸಬಹುದು. ಆದರೆ, ದೀರ್ಘಾವಧಿಯ ಪರಿಣಾಮಗಳು ಹಾನಿಕಾರಕವಾಗುತ್ತವೆ. ಆದ್ದರಿಂದ ಸರ್ಕಾರವು ರೋಗಿಗಳ ಆರೈಕೆಯ ವಿವಿಧ ವ್ಯವಸ್ಥೆಗಳನ್ನು ಬೆರೆಸುವುದನ್ನು ತಪ್ಪಿಸುವುದು ಉತ್ತಮ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವಿದೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಐಎಂಎ ತೆಗೆದುಕೊಳ್ಳುವ ನಿರ್ಧಾರ ಮೇಲೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಡಾ.ಜಯದೇವ್ ತಿಳಿಸಿದರು.