ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ದೇಶಪ್ರೇಮ ಎಂಬುದು ದೇಶಕ್ಕೆ ಬೇಕಾದ ಹಾಗಲ್ಲ. ಯಾವುದೇ ಪಕ್ಷಕ್ಕೆ ಬೇಕಾದ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿರುವ ಅವರು, "ನಮ್ಮ ದೇಶಭಕ್ತಿ ಹೆಚ್ಚಾಗುತ್ತದೆ, ಅಡುಗೆ ಅನಿಲದ ಬೆಲೆ 350 ರೂಪಾಯಿ ಇದ್ದಾಗ, ಪೆಟ್ರೋಲ್ ಬೆಲೆ 70 ರೂಪಾಯಿ ಇದ್ದು ಡೀಸೆಲ್ ಬೆಲೆ 55 ರೂಪಾಯಿ ಇದ್ದಾಗ. ಆದರೆ ನಮ್ಮಲ್ಲಿ ಅಡುಗೆ ಅನಿಲದ ಬೆಲೆ 800 ರೂಪಾಯಿ ಇದ್ದಾಗ, ಪೆಟ್ರೋಲ್ ಬೆಲೆ 87 ರೂಪಾಯಿ ಇದ್ದು ಡೀಸೆಲ್ ಬೆಲೆ 80 ರೂಪಾಯಿ ಇದ್ದಾಗ ನಮ್ಮ ದೇಶಭಕ್ತಿಯು ಮಾಯವಾಗಿ ಬಿಡುತ್ತದೆ!" ಎಂದಿದ್ದಾರೆ.
ಅಂತೆಯೇ "ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ್ ಮಸೂದೆ ಬೇಕೆಂದು ಹೋರಾಟದ ಮೂಲಕ ಕೇಳುವ ನಮ್ಮ ದೇಶಪ್ರೇಮವು ಸರ್ಕಾರ ಬದಲಾದ ಕೂಡಲೇ ತಮ್ಮ ಗುಡಿ ಗಂಡಾರಗಳನ್ನು ಕಿತ್ತುಕೊಂಡು ಮಾಯವಾಗುತ್ತವೆ. ಇನ್ನು ಮಾಧ್ಯಮಗಳೂ ಕೂಡಾ ಈ ದೇಶ ಸುವರ್ಣಯುಗದೆಡೆಗೆ ಸಾಗುತ್ತಿರುವಂತೆ ತೋರಿಸುತ್ತಾ ತಮ್ಮ ದೇಶಪ್ರೇಮವನ್ನು ತೋರಿಸಲು ಯತ್ನಿಸುತ್ತವೆ" ಎಂದಿದ್ದಾರೆ.
ಒಟ್ಟಿನಲ್ಲಿ ಹೇಗಾದರೂ ಕಿತ್ತುಹೋಗಿ ಅರ್ಥವಿಲ್ಲದೇ ಇದ್ದರೂ ಕೂಡಾ ದೇಶಪ್ರೇಮ ಇರಲೇಬೇಕು. ಅದೂ ದೇಶಕ್ಕೆ ಬೇಕಾದ ಹಾಗಲ್ಲ. ಯಾವುದೋ ಒಂದು ಪಕ್ಷಕ್ಕೆ. ಅದರಲ್ಲೂ ರಾಷ್ಟ್ರೀಯ ಬಿಜೆಪಿ ಪಕ್ಷಕ್ಕೆ ಬೇಕಾದ ಹಾಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.