ಬೆಂಗಳೂರು:ಗ್ರಾಮೀಣ ಭಾಗದ ಯುವ ಜನರಿಂದ ಹಿಡಿದು ವೃದ್ಧರವರೆಗೆ ಹಲವರು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚು ಸ್ಮಾರ್ಟ್ ಫೋನ್ಗಳನ್ನು ಬಳಸುವ ವ್ಯಸನ ತಮ್ಮ ನಿದ್ರಾಚಕ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯದೆ ಅವರು ಈ ನಿದ್ರೆಯ ಕೊರತೆ ಸಮಸ್ಯೆಯೊಂದಿಗೆ ವೈದ್ಯರನ್ನು ಕಾಣುತ್ತಿದ್ದಾರೆ. ಇದರಿಂದ ನಿರಂತರ ತಲೆನೋವು ಮತ್ತು ಆಯಾಸ ಯುವಜನರಲ್ಲಿ ಸರ್ವೇ ಸಾಮಾನ್ಯವಾಗುತ್ತಿದೆ ಎಂದು ಮಾನಸ ಆಸ್ಪತ್ರೆಯ ವೈದ್ಯ ಡಾ.ಹೆಚ್.ಎಸ್. ಶಶಿಧರ್ ಕುಮಾರ್ ಗೌರಿಬಿದನೂರು ಹೇಳಿದರು.
ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಹೆಚ್.ಎಸ್. ಶಶಿಧರ್ ಕುಮಾರ್, ಸ್ಮಾರ್ಟ್ ಫೋನ್ಗಳನ್ನು ನಿರಂತರವಾಗಿ ವೀಕ್ಷಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಮತ್ತು ಇತರರನ್ನು ಈ ಡಿಜಿಟಲ್ ವ್ಯಸನದಿಂದ ದೂರ ಮಾಡಲು ಗೌರಿಬಿದನೂರಿನಲ್ಲಿ ಡಿಜಿಟಲ್ ಡಿಟಾಕ್ಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಾಧನಗಳಿಗೆ ಅಂಟಿಕೊಂಡಿರುವ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಮಾರ್ಟ್ ಫೋನ್ಗಳು, ಟಿವಿ ಮಾಧ್ಯಮ, ಇಂಟರ್ನೆಟ್, ಡಿಜಿಟಲ್ ಗೇಮ್ಸ್ ಮತ್ತು ಜೂಜು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಗೌರಿಬಿದನೂರಿನಲ್ಲಿರುವ ಈ ಕೇಂದ್ರದಲ್ಲಿ ಡಿಜಿಟಲ್ ದಾಸರಾಗಿರುವವರಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಸಲಹೆ ನೀಡಲಾಗುತ್ತದೆ. ಈ ಕೇಂದ್ರವು ಇಂತಹ ವ್ಯಕ್ತಿಗಳಿಗೆ ಮುಖಾಮುಖಿ ಸಂವಹನದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿ, ಅವರನ್ನು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಇತ್ಯಾದಿಗಳಿಂದ ವಿರಾಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ತಂತ್ರಜ್ಞಾನದ ವ್ಯಸನವು ವ್ಯಕ್ತಿಗಳಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಈ ವ್ಯಸನಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗೆಗಿನ ಸಂಶೋಧನೆಯನ್ನು ಉಲ್ಲೇಖಿಸುವ ವ್ಯಸನ ಉತ್ಪಾದಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ.ಹೆಚ್.ಎಸ್. ಶಶಿಧರ್ ಕುಮಾರ್ ತಿಳಿಸಿದರು.