ಬೆಂಗಳೂರು:ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ರಾಜ್ಯದ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ಪ್ರಯೋಗಕ್ಕೆ ಡಾ. ಗಿರಿಧರ್ ಕಜೆ ಅವರು ಏಪ್ರಿಲ್ನಲ್ಲಿ ಸರ್ಕಾರಕ್ಕೆ ಅನುಮತಿ ಕೋರಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದ ಬಗ್ಗೆ ವಿವರಿಸಿದ ಅವರು, ಅದು ಯಾವ ರೀತಿ ಕೆಲಸ ಮಾಡಲಿದೆ ಎನ್ನುವ ವಿಸ್ತೃತ ವರದಿ ನೀಡಿದ್ದರು. ಅದಾದ ಬಳಿಕ ಸರ್ಕಾರ ಅಧಿಕೃತವಾಗಿ ಕ್ಲಿನಿಕಲ್ ಟ್ರಯಲ್ಗೆ ಅನುಮತಿ ನೀಡಿತ್ತು.
ಎರಡು ರೀತಿಯ ಆಯುರ್ವೇದ ಮಾತ್ರೆಗಳನ್ನು ಕೊರೊನಾ ಸೋಂಕಿಗೆ ಸಿದ್ದಪಡಿಸಿದ್ದು, ಅದನ್ನು 10 ಸೋಂಕಿತರಿಗೆ ನೀಡಲಾಗಿತ್ತು. ಬೇರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಸೇರಿ 10 ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಸಫಲ ಆಗುತ್ತಿದ್ದಂತೆ ಮುಂದಿನ ಪ್ರಯೋಗಕ್ಕೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರದ ಮುಂದೆ ಮತ್ತೊಂದು ಪ್ರಸ್ತಾವನೆ ಇಟ್ಟಿದ್ದಾರೆ. ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.
ಏನಿದು ಪ್ರಸ್ತಾವನೆ?
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡಲು ಮನವಿ ಮಾಡಿದ್ದಾರೆ. ಯಾವುದೇ ರೀತಿಯ ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೂ ಆಯುರ್ವೇದ ಔಷಧಿ ಯಾವುದೇ ವಿಧದ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಹೀಗಾಗಿ, ಸೋಂಕಿತರಿಗೆ ಈ ಔಷಧಿ ಕೊಟ್ಟರೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗಲ್ಲ. ರೋಗಿಗಳ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜ್ವರ ಸೇರಿ ಇತರೆ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸೋಂಕಿತರಿಗೆ ಆಯುರ್ವೇದ ಮಾತ್ರೆಗಳು ನೀಡಲು ಅನುಮತಿ ಕೋರಿದ್ದಾರೆ.