ಬೆಂಗಳೂರು : ಬೆಂಗಳೂರಿನ ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿರುವ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಪಡೆದುಕೊಂಡಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು. ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಸಭೆ ಮಾಡಿ ಚರ್ಚೆ ನಡೆಸಿದರು.
ಈ ಬಳಿಕ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ಇದೆ. ಕೇಂದ್ರ ಸರ್ಕಾರ ಗೃಹ ಇಲಾಖೆ ಪೊಲೀಸ್ ಮಹಾ ನಿರ್ದೇಶಕರ ಬಳಿ ಮಾತನಾಡಿದ್ದಾರೆ. ಯಾವ ರೀತಿ ಪರಿಸ್ಥಿತಿ ಇದೆ ಎಂದು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆಯಿಂದಲೇ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಇದೀಗ ಇದು ಹುಸಿ ಬಾಂಬ್ ಬೆದರಿಕೆ ಮೇಲ್ ಎನ್ನುವುದು ಗೊತ್ತಾಗಿದೆ. 45 ಶಾಲೆಗಳಿಗೆ ಈ ತರಹದ ಬೆದರಿಕೆ ಇ- ಮೇಲ್ ಹೋಗಿದೆ. ಅಲ್ಲೆಲ್ಲಾ ಸಂಪೂರ್ಣ ಹಾಗೂ ಕುಲಂಕಷ ಪರಿಶೀಲನೆಯನ್ನ ಮಾಡಿದ್ದಾರೆ. ಇದು ನಮ್ಮ ದೇಶದಲ್ಲಿ ಮಾತ್ರ ಆಗಿಲ್ಲ. ಮಲೇಷ್ಯಾ, ಜರ್ಮನಿಯಲ್ಲಿ ಈ ತರಹದ ಇ -ಮೇಲ್ ಸಂದೇಶ ಕಳುಹಿಸಿ, ಬೇರೆ ಬೇರೆ ಶಾಲೆಗಳಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಇದೇ ವೇಳೆ ತಿಳಿಸಿದರು.