ಬೆಂಗಳೂರು :ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಡಾ. ಜಿ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಇಂದು ವಿಧಾನಸಭೆಯಲ್ಲಿ ನಡೆಯಿತು. ಇಬ್ಬರೂ ನಾಯಕರು ಏರು ಧ್ವನಿಯಲ್ಲಿ ಮಾತನಾಡಿದರು. ಯೋಜನೆಯನ್ನೇ ರಿಜೆಕ್ಟ್ ಮಾಡ್ತೇವೆ ಅಂದರೆ ಹೇಗೆ? ಎಂದು ಪರಮೇಶ್ವರ್ ಪ್ರಶ್ನಿಸಿದರು.
12,900 ಕೋಟಿ ರೂ.ಗಳಲ್ಲಿ ಯೋಜನೆ ಮುಗಿಸಬಹುದು. ಆದರೆ, ಈ ಯೋಜನೆಗೆ 23 ಸಾವಿರ ಕೋಟಿ ರೂ. ಹೆಚ್ಚುವರಿ ಏಕೆ?. ನಿಮಗೆ ಇಚ್ಛಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಗರಂ ಆದರು.
ಯೋಜನೆಗೆ ನಾವು ಅವಕಾಶ ಕೊಟ್ಟಿದ್ದೇವೆ. ಹಣವಿಲ್ಲದಿದ್ದರೂ ರೈತರನ್ನು ನಾವು ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ, ಕೊರಟಗೆರೆಯಲ್ಲಿ ಸಮಸ್ಯೆ ಶುರುವಾಗಿದೆ. ಹಾಗಾಗಿ, ಯೋಜನೆಗೆ ತೊಡಕಾಗುತ್ತಿದೆ ಎಂದು ಪರಮೇಶ್ವರ್ ಹೇಳಿಕೆಗೆ ಮಾಧುಸ್ವಾಮಿ ತಿರುಗೇಟು ನೀಡಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ಖಂಡಿತವಾಗಿ ಸೀವೇಜ್ ನೀರು ಕೊಡಬಹುದು. ಯೋಜನೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ನೀರು ಕೊಡುತ್ತೇವೆ. ನಾನೂರು ಎಂಎಲ್ಡಿ ನೀರು ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಡಾ. ಜಿ.ಪರಮೇಶ್ವರ್ ಅವರು ಎತ್ತಿನಹೊಳೆ ಯೋಜನೆ ವಿಚಾರ ಪ್ರಸ್ತಾಪ ಮಾಡಿದರು. ಕಳೆದ 9 ವರ್ಷಗಳಿಂದ ಯೋಜನೆ ಕಾರ್ಯಗತವಾಗಿಲ್ಲ. ಜಮೀನು ಭೂ ಸ್ವಾಧೀನ ಸಾಧ್ಯವಾಗ್ತಿಲ್ಲವೆಂಬ ಉತ್ತರವನ್ನ ಸರ್ಕಾರ ಕೊಟ್ಟಿದೆ.
ಭೂಸ್ವಾಧೀನದ ಹೆಸರು ಹೇಳಿ ಯೋಜನೆಯ ದಾರಿತಪ್ಪಿಸುವುದು ಸರಿಯಲ್ಲ. ಕೊರಟಗೆರೆ, ದೊಡ್ಡಬಳ್ಳಾಪುರದಲ್ಲಿ ಒಂದೊಂದು ಬೆಲೆ ಹೇಳುತ್ತಿರಾ?. ದೊಡ್ಡಬಳ್ಳಾಪುರದ ಭೂಮಿಗೆ ಬೇರೆ ವ್ಯಾಲ್ಯು ಮಾಡ್ತೀರಾ? ಕೊರಟಗೆರೆಯಲ್ಲಿ ಭೂಮಿಗೆ ಇನ್ನೊಂದು ಬೆಲೆ ಹೇಳುತ್ತಿರಾ? ಹೀಗಾಗಿ, ಯೋಜನೆ ಕಾರ್ಯಗತವಾಗದೆ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.