ಬೆಂಗಳೂರು:ನಾವು ಕೂಡ ಕೆಪಿಸಿಸಿ ಅಧ್ಯಕ್ಷರ ನೇಮಕವನ್ನು ಶೀಘ್ರ ಮಾಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದೇವೆ ಎಂದು ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರ ಜೊತೆ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದೇವೆ. ಅವರು ದೆಹಲಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇದರ ಕಡೆ ಸ್ವಲ್ಪ ಗಮನ ಕಡಿಮೆಯಾಗಿದೆ. ಮತ್ತೊಂದು ಬಾರಿ ಹೈಕಮಾಂಡ್ಗೆ ಮನವಿ ಮಾಡ್ತೇವೆ ಎಂದು ಹೇಳಿದರು.
ಇಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ನಮಗೆ ಪ್ರತಿಪಕ್ಷವಾಗಿ ಎಚ್ಚರಿಕೆ ಮಾಡೋಕೆ ಅವಕಾಶವಿದೆ. 17ರಿಂದ ಅಧಿವೇಶನ ಬೇರೆ ನಡೆಯಲಿದೆ. ರಾಜ್ಯದಲ್ಲಿ ಆಡಳಿತ ಯಂತ್ರವೂ ಕುಸಿದಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ನಮ್ಮ ಸರ್ಕಾರ ಹಿಂದೆ ಅನುದಾನ ಬಿಡುಗಡೆ ಮಾಡಿತ್ತು. ಅದನ್ನು ಸರ್ಕಾರ ತಡೆಹಿಡಿದಿದ್ದು, ವಾಪಸ್ ಪಡೆಯುತ್ತಿದೆ. ಇದೆಲ್ಲದರ ವಿರುದ್ಧ ನಾವು ಧ್ವನಿ ಎತ್ತಬೇಕಿದೆ. ಹಾಗಾಗಿ ಅಧ್ಯಕ್ಷರನ್ನ ನೇಮಕ ಮಾಡಿದರೆ ಒಳ್ಳೆಯದು ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಹಿರಿಯರ ಅಸಮಾಧಾನ ವಿಚಾರ ಮಾತನಾಡಿ, ನಮ್ಮಲ್ಲಿ ಕೆಲ ಭಿನ್ನಾಬಿಪ್ರಾಯಗಳು ಇರಬಹುದು. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕು. ನಮ್ಮ ಮನೆಯಲ್ಲೂ ಸಭೆ ಮಾಡಿದ್ದೆ. ಆಗಲೂ ಭಿನ್ನಾಬಿಪ್ರಾಯ ಬಿಟ್ಟು ಹೋಗೋಣ ಎಂದಿದ್ದೆ. ಎಲ್ಲರೂ ಅದಕ್ಕೆ ಒಪ್ಪಿಕೊಂಡಿದ್ದರು. ತಕ್ಷಣವೇ ಅಧ್ಯಕ್ಷರ ನೇಮಕ ಆಗಬೇಕು. ಆಗ ಎಲ್ಲರೂ ಒಟ್ಟಿಗೆ ಹೋಗಲು ಸಹಕಾರಿಯಾಗುತ್ತದೆ ಎಂದರು.
ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಗೊಂದಲ ವಿಚಾರ ಪ್ರಸ್ತಾಪಿಸಿ, ಯಡಿಯೂರಪ್ಪ ಯಾರನ್ನೂ ಸಮಾಧಾನ ಮಾಡೋಕೆ ಆಗಲ್ಲ. ಅದಕ್ಕೆ ಸಂಪುಟ ವಿಸ್ತರಣೆ ವಿಳಂಬವಾಗ್ತಿದೆ. ಬಿಜೆಪಿಯಲ್ಲಿ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ. ಅವರು ಒಂದು ಬಾರಿ ಸಂಪುಟ ವಿಸ್ತರಣೆ ಮಾಡಲಿ. ಆಗ ಎಲ್ಲವೂ ನಮಗೆ ಗೊತ್ತಾಗಲಿದೆ. ಯಾರು ಏನ್ ಹೇಳ್ತಾರೆ, ಯಾರು ಸಿಡಿಯುತ್ತಾರೆ ಗೊತ್ತಾಗುತ್ತೆ. ರಾಜ್ಯದ ಜನರಿಗೂ ಒಂದು ಮಾಹಿತಿ ಹೋಗುತ್ತೆ. ಕೆಲವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. 17 ಜನರಿಗೂ ಸಚಿವ ಸ್ಥಾನ ನೀಡಬೇಕೆಂದಿದೆ. ಕೊಟ್ಟ ಮೇಲೆ ಯಾರು ಏನಾಗ್ತಾರೆ ಗೊತ್ತಾಗುತ್ತದೆ. ನಾವು ಅದನ್ನೇ ಕಾಯುತ್ತಿದ್ದೇವೆ. ಯಡಿಯೂರಪ್ಪನವರಿಗೆ ನಿಭಾಯಿಸೋದು ಕಷ್ಟವಾಗಲಿದೆ. ನಮಗೂ ಕೆಲವು ಅನುಕೂಲವಾಗಬಹುದು ಎಂದು ಬಿಜೆಪಿ ಗೊಂದಲದ ಬಗ್ಗೆ ಪರಮೇಶ್ವರ್ ವ್ಯಂಗ್ಯವಾಡಿದರು.
ನಿಲ್ಲಿಸೋದು ಸರಿಯೇ?
ನವ ಬೆಂಗಳೂರು ಯೋಜನೆ ತಡೆ ವಿಚಾರದ ಬಗ್ಗೆ ಮಾತನಾಡಿ, ಜನಪರ ಕೆಲಸಗಳನ್ನ ತಡೆಯೋದು ಸರಿಯಲ್ಲ. ಯೋಜನೆಗೆ ಬೇಕಾದರೆ ಬೇರೆ ಹೆಸರನ್ನಿಟ್ಟುಕೊಳ್ಳಲಿ. ಆದರೆ ಜನರ ಬಗ್ಗೆ ನಿಮಗೆ ಕೋಪ ಯಾಕೆ? ನಮ್ಮ ಅವಧಿಯಲ್ಲಿನ ಕಾರ್ಯಕ್ರಮ ಯಾಕೆ ನಿಲ್ಲಿಸೋದು? ತಪ್ಪಿದ್ದರೆ ಬೇಕಾದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ. ಆದರೆ ಕಾರ್ಯಕ್ರಮವನ್ನೇ ನಿಲ್ಲಿಸೋದು ಸರಿಯೇ ಎಂದು ಪ್ರಶ್ನಿಸಿದರು.