ಬೆಂಗಳೂರು :ಹಳೆಯ ಶಿಕ್ಷಣ ನೀತಿಯಲ್ಲಿನ ಶೇ. 20ರಷ್ಟು ನಿಲುವುಗಳನ್ನಷ್ಟೇ ಬದಲಿಸಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದರಲ್ಲಿ ಗುಣಾತ್ಮಕ, ಕೌಶಲ್ಯಾಭಿವೃದ್ಧಿದಾಯಕ ನೀತಿಗಳು ಅಡಕವಾಗಿವೆ. ಇದರಿಂದ ಮುಂಬರುವ ಸ್ವಾತಂತ್ರ್ಯ ಸಂಭ್ರಮದಲ್ಲಿ ಅಂದರೆ 2025ರ ವೇಳೆಗೆ ದೇಶ ಅಭಿವೃದ್ಧಿ ಹೊಂದಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ತಿಳಿಸಿದರು.
ನಗರದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ಟಿ. ಜಾನ್ ತಾಂತ್ರಿಕ ಸಂಸ್ಥೆ ಆಯೋಜಿಸಿದ್ದ ಎನ್‌ಇಪಿ–2020 ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ನೀತಿ, ನಿಲುವುಗಳನ್ನು ಆಧರಿಸಿ ಇತಿಹಾಸ ತಿರುಚುವ ಪಠ್ಯಗಳನ್ನು ನೂತನ ನೀತಿಯಲ್ಲಿ ಅಳವಡಿಸಲಾಗುತ್ತಿದೆ ಎಂಬ ಆರೋಪ ಸರಿಯಲ್ಲ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿ ಪಠ್ಯ ಕ್ರಮವನ್ನು ಸರ್ಕಾರ ನಿಗದಿಪಡಿಸುವುದಿಲ್ಲ. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಪಠ್ಯಕ್ರಮ ರೂಪಿಸಲಿದ್ದಾರೆ. ಪಠ್ಯದ ಅಂಶಗಳನ್ನು ನಿಗದಿಪಡಿಸಲು ತನ್ನದೇ ಆದ ವ್ಯವಸ್ಥೆಯಿದೆ. ಜತೆಗೆ ಕಲಿಸುವ, ಮೌಲ್ಯ ಮಾಪನ ಮಾಡುವ ವಿಧಾನದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ.