ಬೆಂಗಳೂರು :ವಿಜಯನಗರ ಸಾಮ್ರಾಜ್ಯವನ್ನು ಕುರಿತು ಬಹುಶಿಸ್ತೀಯ ಅಧ್ಯಯನಗಳನ್ನು ನಡೆಸುವಂತಹ ಪೀಠವನ್ನು ಹಂಪಿಯ ಕನ್ನಡ ವಿವಿಯಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಸಿದ್ದು ಅಲಗೂರು ಅವರ ನೇತೃತ್ವದ ನಿಯೋಗವು ಇಂತಹ ಪೀಠವನ್ನು ತಮ್ಮ ಬಳ್ಳಾರಿಯ ವಿವಿಯಲ್ಲಿ ಸ್ಥಾಪಿಸಬೇಕೆಂದು ಕೋರಿ ಸಲ್ಲಿಸಿದ ಪ್ರಸ್ತಾವನೆಯನ್ನು ಸ್ವೀಕರಿಸಿದ ಅವರು, ಈ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ಹಾಜರಿದ್ದ ಶಿಕ್ಷಣ ತಜ್ಞ ಅರವಿಂದರಾವ್ ದೇಶಪಾಂಡೆ, ಸಂಘ ಪರಿವಾರದ ಪ್ರಮುಖರಾದ ತಿಪ್ಪೇಸ್ವಾಮಿ, ರಾಘವೇಂದ್ರ ಕಾಗವಾಡ, ಕುಲಸಚಿವ ಎ ಸಿ ಪಾಟೀಲ ಮುಂತಾದವರು, `ಕೃಷ್ಣದೇವರಾಯನ ಹೆಸರನ್ನು ಹೊತ್ತಿರುವ ಬಳ್ಳಾರಿ ವಿವಿಯಲ್ಲಿ ಉದ್ದೇಶಿತ ಪೀಠ ಸ್ಥಾಪನೆಯಾದರೆ, ಸೂಕ್ತವೆನ್ನುವುದು ವಿವಿ ಅಭಿಪ್ರಾಯವಾಗಿದೆ.
ಆದರೆ, 'ಹಂಪಿಯ ಕನ್ನಡ ವಿವಿಯಲ್ಲಿ ಇದು ಅಸ್ತಿತ್ವಕ್ಕೆ ಬಂದರೂ ತಕರಾರೇನಿಲ್ಲ. ಒಟ್ಟಿನಲ್ಲಿ ಈ ಅಧ್ಯಯನ ಪೀಠವು ತ್ವರಿತವಾಗಿ ಸ್ಥಾಪನೆಯಾಗಬೇಕು’ ಎನ್ನುವ ಮೂಲಕ ತಮ್ಮ ಸಮ್ಮತಿ ಸೂಚಿಸಿದರು.