ಆಸ್ತಿ ಕಲಹ ಅಪ್ಪ-ಅಮ್ಮನನ್ನೇ ಹೊಡೆದು ಕೊಂದ ಮಗ ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುತ್ತಾರೆ ಎಂಬ ಕೋಪಕ್ಕೆ ಮಗನೇ ಹೆತ್ತವರನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಪ್ರಕರಣ ನಡೆದಿದ್ದು, ವಯೋವೃದ್ಧ ದಂಪತಿಗಳಾದ ರಾಮಕೃಷ್ಣಪ್ಪ (70) ಮುನಿರಾಮಕ್ಕ (65) ಕೊಲೆಯಾಗಿದ್ದಾರೆ. ಹೆತ್ತವರನ್ನು ಕೊಂದ ಆರೋಪದಲ್ಲಿ ಮಗ ನರಸಿಂಹಮೂರ್ತಿಯನ್ನ ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಕ್ರಣಕ್ಕೆ ಕಾರಣ:ಕೊಲೆಯಾದ ರಾಮಕೃಷ್ಣಪ್ಪ ಹಾಗೂ ಮುನಿರಾಮಕ್ಕ ದಂಪತಿಗೆ ಐದು ಜನ ಮಕ್ಕಳು. ಐದು ಜನ ಮಕ್ಕಳ ಪೈಕಿ ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಗಂಡು ಮಗ, ಆ ಕುಲಪುತ್ರನೇ ಈ ನರಸಿಂಹಮೂರ್ತಿ. ಮದುವೆಯಾದಗಿನಿಂದ ಬೇರೆ ಮನೆಯಲ್ಲಿ ವಾಸವಾಗಿದ್ದ. ಅಸ್ತಿ ಭಾಗ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ಹೆತ್ತವರ ನಡುವೆ ಜಗಳವಾಗುತ್ತಿತ್ತು, ಹೆಣ್ಣು ಮಕ್ಕಳಿಗೆಲ್ಲ ಮದುವೆ ಮಾಡಿಕೊಡಲಾಗಿದ್ದು, ಯಾವುದೇ ಆಸ್ತಿಯನ್ನು ಭಾಗ ಮಾಡುವಂತಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ನರಸಿಂಹಮೂರ್ತಿ, ಆಸ್ತಿ ವಿಚಾರಕ್ಕೆ ಹಲವು ವರ್ಷಗಳಿಂದ ತಂದೆ ತಾಯಿಗೆ ಹಿಂಸೆಯನ್ನು ನೀಡುತ್ತಿದ್ದ.
ಆದರೆ, ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ನೀಡಬೇಕೆಂಬುದು ವೃದ್ಧ ದಂಪತಿಯ ಆಸೆಯಾಗಿತ್ತು, ಇದೇ ವಿಚಾರವಾಗಿ ಕಳೆದ ಶನಿವಾರ ಸಂಜೆ ತಂದೆ ತಾಯಿ ವಾಸವಿದ್ದ ಮನೆಗೆ ಹೋಗಿದ್ದ ನರಸಿಂಹಮೂರ್ತಿ, ಹೆತ್ತವರೊಂದಿಗೆ ಜಗಳ ಮಾಡಿ ತಂದೆ ರಾಮಕೃಷ್ಣಪ್ಪ ಮತ್ತು ತಾಯಿ ಮುನಿರಾಮಕ್ಕ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕೊಲೆ ಳಿಕ ತನಗೆ ಏನು ತಿಳಿಯದ ಹಾಗೆ ಮನೆಯಲ್ಲಿಯೇ ಇದ್ದ. ಪ್ರತಿ ದಿನ ಹೆಣ್ಣುಮಕ್ಕಳಿಗೆ ಕರೆ ಮಾಡುತ್ತಿದ್ದ ವೃದ್ಧ ದಂಪತಿ, ಶನಿವಾರದಿಂದ ಕರೆ ಮಾಡಿರಲಿಲ್ಲ, ಹೀಗಾಗಿ ಅನುಮಾನಗೊಂಡಿದ್ದ ಹೆಣ್ಣು ಮಕ್ಕಳು, ಮನೆಯ ಬಳಿ ಬಂದು ನೋಡಿದ್ದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ಹೇಳಿದ್ದಿಷ್ಟು:ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದು, ''ನಿನ್ನೆ ಸಂಜೆ ದಿನ ಕೊಲೆಯಾದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಇದರ ಮೇರೆಗೆ ಸೂಲಿಬೆಲಿ ಠಾಣೆ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಇಬ್ಬರ ವೃದ್ಧ ದಂಪತಿಯ ಮೃತ ದೇಹಗಳು ಪತ್ತೆಯಾಗಿವೆ. ಮೃತ ರಾಮಕೃಷ್ಣಪ್ಪ ಅವರ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿರುವ ಗುರುತು ಪತ್ತೆಯಾಗಿದೆ. ಮುನಿರಾಮಕ್ಕ ಅವರಿಗೆ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಮೃತರ ಮಗಳು ಶಕುಂತಲ ದೂರನ್ನು ನೀಡಿದ್ದಾರೆ. ಸದ್ಯ ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಗನ ತಪ್ಪಿಗೆ ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಮೆರವಣಿಗೆ, 7 ಜನರ ಬಂಧನ