ಬೆಂಗಳೂರು:ಮದ್ಯ ನೀಡಲು ನಿರಾಕರಿಸಿದಕ್ಕೆ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಆಸ್ತಕಿಕರ ವಿಷಯವೆಂದರೆ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಾಗ ಆರೋಪಿಗಳು ಮತ್ತೊಂದು ಕೊಲೆ ಮಾಡಿರುವ ಸಂಗತಿ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಬಾಗೇಪಲ್ಲಿಯ ಶಂಕರ, ಚಿಂತಾಮಣಿಯ ನಲ್ಲಗುಟ್ಟ ಗ್ರಾಮದ ಮಂಜುನಾಥ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಕುಂಟ ಹಾಗೂ ಸೋಮ ಎಂಬುವರು ಭಾಗಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಕೊಲೆಯಾದ ಬಾಲಾಜಿ ಹಾಗೂ ರಮೇಶ್ ಸ್ನೇಹಿತರಾಗಿದ್ದರು. ಜೀವನಕ್ಕಾಗಿ ಚಿಂದಿ ಆಯುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು.
ಸಹಜವಾಗಿ ನಡೆಯುತ್ತಿದ್ದ ಇವರ ಜೀವನಕ್ಕೆ ಲಾಕ್ ಡೌನ್ ಮಗ್ಗುಲ ಮುಳ್ಳಾಗಿದೆ. ಲಾಕ್ ಡೌನ್ ನಿಂದಾಗಿ ಕೈಯಲ್ಲಿ ಕೆಲಸವಿಲ್ಲದಿದ್ದಾಗ ದಾನಿಗಳು ನೀಡಿದ ಆಹಾರವನ್ನೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಸರ್ಕಾರ ಮದ್ಯದಂಗಡಿ ಅನುಮತಿ ನೀಡುತ್ತಿದ್ದಂತೆ ಕುಡಿತದ ಚಟ ಬೆಳೆಸಿಕೊಂಡಿದ್ದ ಮೃತ ಬಾಲಾಜಿ ಹೇಗೋ ಹಣ ಹೊಂದಿಸಿಕೊಂಡು ಮದ್ಯದ ಪ್ಯಾಕೆಟ್ ತಂದಿದ್ದಾನೆ. ಇದನ್ನು ನೋಡಿದ ಆರೋಪಿಗಳು ಮದ್ಯಕ್ಕಾಗಿ ಮುಗಿಬಿದ್ದಿದ್ದಾರೆ. ಆಗ ಎಣ್ಣೆ ನೀಡಲು ಬಾಲಾಜಿ ತಕರಾರು ತೆಗೆದಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಆರೋಪಿಗಳು ಬಾಲಾಜಿಗೆ ಕಲ್ಲಿನಿಂದ ಹೊಡೆದು ಜಜ್ಜಿ ಕೊಲೆ ಮಾಡಿ ಗೊತ್ತಿಲ್ಲದವರಂತೆ ನಟಿಸಿದ್ದಾರೆ.
ಮಾರ್ಮಾಂಗಕ್ಕೆ ಕಾಲಿನಿಂದ ಒದ್ದು ಮತ್ತೊಂದು ಕೊಲೆ.!
ಕೋಗಿಲು ಏರಿಯಾದಲ್ಲಿ ಮಧ್ಯರಾತ್ರಿ ನಡೆದ ಕೊಲೆಯನ್ನು ಸಮೀಪದ ಮೇಲ್ಸೇತುವೆ ಕೆಳಗೆ ಮಲಗಿದ್ದ ರಮೇಶ ಕಣ್ಣಾರೆ ಕಂಡಿದ್ದಾನೆ. ಕೊಲೆ ವಿಷಯವನ್ನು ಪೊಲೀಸರಿಗೆ ಹೇಳಬಹುದೆಂಬ ಭೀತಿಗೆ ಒಳಗಾದ ಆರೋಪಿಗಳು ಮಾರನೇ ದಿನ ನಸುಕಿವ ಜಾವ ತೆರಳಿ ಬಲವಾದ ಕೋಲಿನಿಂದ ರಮೇಶ್ ಗೆ ಹೊಡೆದು ಕೆಳಗೆ ಬೀಳಿಸಿದ್ದಾರೆ. ಕಾಲಿನಿಂದ ಆತನ ಮರ್ಮಾಂಗಕ್ಕೆ ಒದ್ದು ಹತ್ಯೆ ಮಾಡಿದ್ದಾರೆ. ಬಳಿಕ ಬೆಡ್ ಶೀಟ್ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಶವವನ್ನು 500 ಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಿಸಿದ್ದಾರೆ. ಇದನ್ನು ನೋಡಿ ಅನುಮಾನಗೊಂಡು ವ್ಯಕ್ತಿಯೋರ್ವ ಪ್ರಶ್ನಿಸಿದಕ್ಕೆ ಸಾಕುನಾಯಿ ಸತ್ತು ಹೋಗಿದ್ದು, ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿ ಮಧುರ ಮಿಲನ ಚೌಟ್ರಿಯ ಹಿಂಭಾಗದ ನೀಲಗಿರಿ ತೋಪಿನಲ್ಲಿ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಇನ್ಸ್ಪೆಕ್ಟರ್ ಎಂ. ಬಿ. ರಾಮಕೃಷ್ಣರೆಡ್ಡಿ ನೇತೃತ್ವದ ತಂಡ ಆರೋಪಿಗಳ ಕೈಗಳಿಗೆ ಕೊಳ ತೊಡಿಸಿ ಜೈಲಿಗಟ್ಟಿದ್ದಾರೆ.