ಬೆಂಗಳೂರು:ಕಾಂಗ್ರೆಸ್ ಪಕ್ಷ 57 ವರ್ಷ ದೇಶದ ಆಡಳಿತ ಮಾಡಿದ್ದು ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿ ಮಾಡಲಿಲ್ಲ. ಆದರೆ ನಮ್ಮ ಡಬಲ್ ಎಂಜಿನ್ ಸರಕಾರದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿ ಕಾರ್ಯ ಬಹಳ ವೇಗದಿಂದ ಸಾಗಿದೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್, ದಲಿತರು, ಎಸ್‍ಸಿ, ಎಸ್‍ಟಿ ಸಮುದಾಯವನ್ನು ನಿರಂತರವಾಗಿ ವಂಚಿಸಿತು ಎನ್ನುವುದು ಈಗ ಸಮುದಾಯಗಳಿಗೆ ಅರಿವಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಲಾಲ್ ಸಿಂಗ್ ಆರ್ಯ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಾಮಾಜಿಕ ನ್ಯಾಯ ಸಪ್ತಾಹ, ಡಾ.ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದೆ. ಬಡವರು, ನ್ಯಾಯವಂಚಿತರಿಗೆ ನ್ಯಾಯ ನೀಡಲು, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶಿಕ್ಷಣದ ಸಮಾನತೆ ನೀಡಲು ಮುಂದಾಗಿದೆ. ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ಬೊಮ್ಮಾಯಿ ಅವರ ಸರಕಾರಗಳು ಈ ವರ್ಗಗಳಿಗೆ ನಿರಂತರವಾಗಿ ನ್ಯಾಯ ಕೊಟ್ಟಿದೆ. ಆದರೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ಬಿಜೆಪಿ ಸರಕಾರಗಳ ವಿರುದ್ಧ ಷಡ್ಯಂತ್ರ ನಡೆಸಿದ್ದವು. ದಲಿತ ವಿರೋಧಿ ಎಂಬ ತಪ್ಪು ಮಾಹಿತಿ ಕೊಡಲಾಗುತ್ತಿತ್ತು ಎಂದು ಆಕ್ಷೇಪಿಸಿದರು.
ಸಂವಿಧಾನದನ್ವಯ ಬಿಜೆಪಿ ನಡೆಯಲಿದೆ ಎಂದು ಅಟಲ್ ತಿಳಿಸಿದ್ದರು. ಬಡವರು, ಮಹಿಳೆಯರು, ರೈತರ ಪರ ಇರುವ ಸರಕಾರ ತಮ್ಮದು ಎಂದು ಮೋದಿ ಹೇಳಿದ್ದರು. ಮೀಸಲಾತಿ ರದ್ದು ಕುರಿತ ಪ್ರಶ್ನೆಗೆ ಅದು ಸಾಧ್ಯವೇ ಇಲ್ಲ, ಹಿರಿಯ ಮುಖಂಡ ಪಂಡಿತ್ ದೀನದಯಾಳ್ ಉಪಾಧ್ಯಾಯರು ಅಂತ್ಯೋದಯ- ಸಮಾನತೆಯ ಚಿಂತನೆ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ಇದೇ ಹಾದಿಯಲ್ಲಿ ಮೋದಿ, ಬೊಮ್ಮಾಯಿ ಸರಕಾರಗಳು ಮುನ್ನಡೆಯುತ್ತಿವೆ. ಶಿವಾಜಿನಗರ ಸಾಮಾನ್ಯ ಕ್ಷೇತ್ರವಿದ್ದರೂ ಎಸ್‍ಸಿ ಸಮಾಜದ ಚಂದ್ರು ಅವರಿಗೆ ಸೀಟ್ ಕೊಡಲಾಗಿದೆ. ಕೇಂದ್ರದ ಸಚಿವಸಂಪುಟ, ರಾಜ್ಯಪಾಲರ ನೇಮಕಾತಿಯಲ್ಲೂ ನಾವು ದಲಿತರು, ಶೋಷಿತರಿಗೆ ನ್ಯಾಯ ನೀಡಿದ್ದೇವೆ ಎಂದು ತಿಳಿಸಿದರು.
ಎಸ್‍ಸಿ 15ರ ಬದಲಾಗಿ ಶೇ 17 ಮತ್ತು ಎಸ್‍ಟಿಗೂ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ನಾವು ಮೀಸಲಾತಿ ವಿರೋಧಿಗಳಾದರೆ ಹೀಗೆ ಮಾಡಬೇಕಿತ್ತೇ? ಹಲವು ದಶಕಗಳ ಒಳ ಮೀಸಲಾತಿ ಬೇಡಿಕೆಯನ್ನೂ ಈಡೇರಿಸಿದ್ದೇವೆ. ಕಾಂಗ್ರೆಸ್ ಪಕ್ಷ ಈ ಕೆಲಸ ಮಾಡಿಲ್ಲವೇಕೆ. ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ಜಾರಿಯನ್ನು ಬಾಬಾಸಾಹೇಬ ಅಂಬೇಡ್ಕರರು ವಿರೋಧಿಸಿದ್ದರು. ಆದರೆ, ಅದನ್ನು ಕಾಂಗ್ರೆಸ್ ಆಡಳಿತದಲ್ಲಿ ಜಾರಿ ಮಾಡಲಾಗಿತ್ತು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಅಂಬೇಡ್ಕರರ ಭಾವನೆಯನ್ನು ತಿರಸ್ಕರಿಸಿತ್ತು. ಆದರೆ, ನಾವು 370ನೇ ವಿಧಿ ರದ್ದು ಮಾಡಿ, ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಹೆಚ್ಚಿಸಿದವರು. ನಾವು ಸಂವಿಧಾನದ ಪರ ಇದ್ದೇವೆ. ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 1975ರಲ್ಲಿ ಕುರ್ಚಿ ಉಳಿಸಿಕೊಳ್ಳಲು ಅಲಹಾಬಾದ್ ಕೋರ್ಟಿನ ತೀರ್ಪು ಉಲ್ಲಂಘಿಸಿ ತುರ್ತು ಪರಿಸ್ಥಿತಿ ಹೇರಿತ್ತು ಎಂದು ತಿಳಿಸಿದರು. ಮೀಸಲಾತಿ ಹೆಚ್ಚಳ ತಪ್ಪು ಎನ್ನುವ ಕಾಂಗ್ರೆಸ್ ನಿಜವಾಗಿ ಮೀಸಲಾತಿ ವಿರೋಧಿ. ಜಮ್ಮು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೆ ತರುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಕಾಂಗ್ರೆಸ್ಸಿಗರು ಹಿರಿಯ ದಲಿತ ಮುಖಂಡ ಬಾಬು ಜಗಜೀವನರಾಂ ಅವರಿಗೆ ಅವಮಾನ ಮಾಡಿದ್ದರು ಎಂದು ಟೀಕಿಸಿದರು.
1952ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರರನ್ನು ಸೋಲಿಸಿದ್ದು, ಅನಂತರ ಮತ್ತೊಮ್ಮೆ ಚುನಾವಣೆಗೆ ನಿಂತಾಗಲೂ ಅವರನ್ನು ಸೋಲಿಸಲಾಯಿತು. ಅಂಬೇಡ್ಕರ್ ಅವರಿಗೆ ಭಾರತ್ ರತ್ನ ಪ್ರಶಸ್ತಿ ಸಿಗಲು 4 ದಶಕಕ್ಕೂ ಹೆಚ್ಚು ಕಾಲ ಬೇಕಾಯಿತು. ಆದರೆ ಇಂದಿರಾ, ನೆಹರೂ ಅವರಿಗೆ ಜೀವಿತಾವಧಿಯಲ್ಲೇ ಭಾರತ ರತ್ನ ಪ್ರಶಸ್ತಿ ಸಿಕ್ಕಿತ್ತು. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಂಬೇಡ್ಕರ್ ಹೆಸರಿನಲ್ಲಿ ಕಾಂಗ್ರೆಸ್ ಯಾವುದೇ ಯೋಜನೆ ಜಾರಿ ಮಾಡಲಿಲ್ಲ. ಮೋದಿ ಅವರು ಅಂಬೇಡ್ಕರ್ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ ಎಂದ ಅವರು, 2015ರಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಬಳಿಕ ಸಂವಿಧಾನ ದಿನ ಆಚರಣೆಯು ಮೋದಿ, ಬಿಜೆಪಿ ಅವರಿಂದ ಜಾರಿಗೆ ಬಂತು. ಕಾಂಗ್ರೆಸ್ ಬಡವರ ಕಡೆ ಗಮನ ಕೊಟ್ಟಿಲ್ಲ. ಆಯುಷ್ಮಾನ್, ಶೌಚಾಲಯ, ಜನಧನ್- ಇವೆಲ್ಲವೂ ಮೋದಿ ಅವರ ಬಡವರಪರ ಕಾಳಜಿಯ ಸೂಚಕಗಳು. ಕಾಂಗ್ರೆಸ್ ಪಕ್ಷವೂ ಎಸ್‍ಸಿ, ಎಸ್‍ಟಿ ಮತ್ತು ಬಡವರ ವಿರೋಧಿ ಆಗಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷ ಖರ್ಗೆ ಇಲ್ಲಿಯೇ ಇದ್ದಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ ತಮ್ಮ ಶಾಸಕರ ಮನೆ ಹೊತ್ತಿಸಿದರೂ ಧ್ವನಿ ಎತ್ತಲಿಲ್ಲ. ಕಾಂಗ್ರೆಸ್ ಖರ್ಗೆಯವರಿಗೆ ಗೌರವ ಕೊಡುತ್ತಿಲ್ಲ. ಅವರ ನೆಪಮಾತ್ರಕ್ಕೆ ಅಧ್ಯಕ್ಷ. ಬೂತ್‍ವರೆಗೆ ಅಂಬೇಡ್ಕರ್ ಜಯಂತಿ ಮಾಡುವ ಪಕ್ಷ ನಮ್ಮದು. ಆದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಈ ಆಚರಣೆ ನಡೆಯುತ್ತಿಲ್ಲ. ಸಂಘಟನೆಯಲ್ಲೂ ನಾವು ಮೀಸಲಾತಿ ಕೊಟ್ಟಿದ್ದೇವೆ.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾಕೆ? ಭಾರತ್ ರತ್ನ ಯಾಕೆ ಕೊಟ್ಟಿಲ್ಲ? ಒಂದೇ ಒಂದು ಯೋಜನೆಗೆ ಅಂಬೇಡ್ಕರರ ಹೆಸರು ಯಾಕೆ ಕೊಟ್ಟಿಲ್ಲ? ಸಂವಿಧಾನ ದಿನವನ್ನು ಯಾಕೆ ಆಚರಿಸಿಲ್ಲ? ಎಂದು ಪ್ರಶ್ನಿಸಿದರು.
ಇದನ್ನೂಓದಿ:ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: ಶ್ರೀ ಯಲ್ಲಮ್ಮದೇವಿ ಆಶೀರ್ವಾದ ಯಾರಿಗೆ..?