ಕರ್ನಾಟಕ

karnataka

ETV Bharat / state

ವ್ಯಾಕ್ಸಿನ್ ಕೇಂದ್ರಗಳಲ್ಲಿ ಜನ ಸಾಲುಗಟ್ಟಿದ್ದಾರೆ.. ಡಬಲ್ ಎಂಜಿನ್ ಸರ್ಕಾರ ಏನು ಮಾಡ್ತಿದೆ, SR ಪಾಟೀಲ್ ಪ್ರಶ್ನೆ

ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ, ವ್ಯಾಕ್ಸಿನ್ ಕೇಂದ್ರಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸರ್ಕಾರ ವ್ಯಾಕ್ಸಿನ್​ಗೆ ವ್ಯವಸ್ಥೆ ಮಾಡಿಕೊಳ್ಳುವ ಬದಲು ದಿನಕ್ಕೊಂದು ಆದೇಶ ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಡಬಲ್ ಇಂಜಿನ್​ ಸರ್ಕಾರ ಕೆಲಸ ಮಾಡುವುದು ಇದೇ ರೀತಿಯಲ್ಲಾ..? ಎರಡೂ ಎಂಜಿನ್​ಗಳೂ ಕೆಟ್ಟು ನಿಂತಿವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆರೋಪಿಸಿದ್ದಾರೆ.

ಎಸ್.ಆರ್. ಪಾಟೀಲ್
ಎಸ್.ಆರ್. ಪಾಟೀಲ್

By

Published : May 13, 2021, 5:00 PM IST

ಬೆಂಗಳೂರು: ಕೋವಿಡ್ ಮಹಾಮಾರಿಯ 2ನೇ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೇ 1ರಂದು 18 ವರ್ಷ ಮೀರಿದವರಿಗೆ ಕೊರೊನಾ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ವ್ಯಾಕ್ಸಿನ್ ಕೊರತೆಯಿದ್ದಾಗಲೂ ಇಂತಹ ನಾಟಕಕ್ಕೆ ಕರ್ನಾಟಕ ಸಾಕ್ಷಿಯಾಗಿತ್ತು. ಈಗ ಸರ್ಕಾರ ಮುಂದಿನ ಆದೇಶದವರೆಗೂ ಈ ಅಭಿಯಾನ ನಿಲ್ಲಿಸಿದೆ. 45 ವರ್ಷ ಮೀರಿದವರಿಗೆ ಕೇವಲ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ವ್ಯಾಕ್ಸಿನ್ ಕೊಡುವುದಾಗಿ ಆದೇಶ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ, ವ್ಯಾಕ್ಸಿನ್ ಕೇಂದ್ರಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸರ್ಕಾರ ವ್ಯಾಕ್ಸಿನ್​ಗೆ ವ್ಯವಸ್ಥೆ ಮಾಡಿಕೊಳ್ಳುವ ಬದಲು ದಿನಕ್ಕೊಂದು ಆದೇಶ ಮಾಡಿ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಮುಖ್ಯಮಂತ್ರಿಗಳ ಮಾತಿಗೂ, ಆರೋಗ್ಯ ಸಚಿವರ ಮಾತಿಗೂ ತಾಳ ಮೇಳವೇ ಇಲ್ಲ. ಈ ಸರ್ಕಾರವನ್ನು ನಂಬಿದ್ರೆ ಸಾವೇ ಗತಿ. 3 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿಗೆ ಆರ್ಡರ್ ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವ್ಯಾಕ್ಸಿನ್ ಕಂಪನಿಗಳಿಂದ ರಾಜ್ಯಕ್ಕೆ ಬಂದಿರುವುದು ಕೇವಲ 7 ಲಕ್ಷ ಡೋಸ್ ಅಷ್ಟೇ. ಕೇಂದ್ರ ಸರ್ಕಾರವೂ ಕರ್ನಾಟಕಕ್ಕೆ ಕೊಡಬೇಕಾದ ವ್ಯಾಕ್ಸಿನ್ ಪಾಲು ಕೊಡುತ್ತಿಲ್ಲ ಎಂದಿದ್ದಾರೆ.

ಸಂಸದರು ಎಲ್ಲಿದ್ದಾರೆ..?

ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು ಎಲ್ಲಿದ್ದಾರೆ..? ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುವುದು ಇದೇ ರೀತಿಯಲ್ಲಾ..? ಎರಡೂ ಎಂಜಿನ್​ಗಳೂ ಕೆಟ್ಟು ನಿಂತಿವೆ. ಈ ಎಂಜಿನ್​ಗಳನ್ನು ಮುಂದಿನ ಚುನಾವಣೆಯಲ್ಲಿ ಜನ ಶಾಶ್ವತವಾಗಿ ಗುಜರಿಗೆ ಕಳಿಸಲಿದ್ದಾರೆ ಎಚ್ಚರಿಕೆ. ಸುಳ್ಳು ಹೇಳಿಕೊಂಡು ಕಾಲ ಕಳೆಯುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ಸೀಮರು. ದೇಶದಲ್ಲಿ ವ್ಯಾಕ್ಸಿನ್ ಉತ್ಪಾದನೆಯೇ ಕುಂಟುತ್ತಾ ಸಾಗಿರುವಾಗ 18 ವರ್ಷ ಮೀರಿದವರಿಗೆ ಕೊಡುತ್ತೇವೆ ಎಂದು ಘೋಷಿಸಿದ್ಯಾಕೆ..? ನಿಮ್ಮ ಸುಳ್ಳು ಘೋಷಣೆಗಳಲ್ಲಿ ಇದೂ ಒಂದು ಅನ್ನೋದನ್ನು ಅರಿಯದ ಯುವ ಸಮುದಾಯ ವ್ಯಾಕ್ಸಿನ್​ಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಳ್ಳು ಹೇಳಿದ ಪ್ರಧಾನಿ:

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ 7 ವರ್ಷಗಳಿಂದ ಸುಳ್ಳು ಹೇಳುವ ಮೂಲಕ ಮೋಸ ಮಾಡಿದ್ದೀರಿ. ಕನಿಷ್ಠ ಪಕ್ಷ ಜೀವ ಉಳಿಸಿಕೊಳ್ಳುವ ವಿಷಯದಲ್ಲಾದರೂ ಸತ್ಯ ಹೇಳಿ. ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಏನು ಕ್ರಮ ಕೈಗೊಂಡಿದ್ದೀರಿ? ವ್ಯಾಕ್ಸಿನ್​ಗಾಗಿ ಜನ ಇನ್ನು ಎಷ್ಟು ದಿನ ಕಾಯಬೇಕು? ರಾಜ್ಯಕ್ಕೆ ಕೊಡಬೇಕಾದ ವ್ಯಾಕ್ಸಿನ್ ಯಾವಾಗ ಸಿಗುತ್ತೆ? ಎಂದು ಕೇಳಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಲೇ 24 ಜನ ಮೃತಪಟ್ಟಿದ್ದಾರೆ. ಸರ್ಕಾರ, ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ಹೈಕೋರ್ಟ್​ಗೆ ತನಿಖಾ ವರದಿ ಸಲ್ಲಿಸಿದೆ. 3 ಜನ ಮಾತ್ರ ಆಕ್ಸಿಜನ್​ನಿಂದ ಮೃತರಾಗಿದ್ದಾರೆ ಎಂದು ಸಚಿವರಾದ ಡಾ ಕೆ ಸುಧಾಕರ್ ಹಾಗೂ ಸುರೇಶ್ ಕುಮಾರ್ ಅವರು ರಾಜ್ಯದ ಜನರಿಗೆ ಸುಳ್ಳು ಹೇಳಿದ್ಯಾಕೆ..? ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 24 ಜನ ಸತ್ತಿದ್ದು ಕೇವಲ ಸಾವಲ್ಲ, ಅದು ಸರ್ಕಾರವೇ ನಡೆಸಿದ ಕೊಲೆ. ನಿವೃತ್ತ ನ್ಯಾಯಮೂರ್ತಿಗಳೇ ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ಈ ಸಾವುಗಳಿಗೆ ಯಾರು ಹೊಣೆಗಾರರು..? ನಿಮ್ಮ ಇಡೀ ಸರ್ಕಾರ ಈ ಸಾಮೂಹಿಕ ಕೊಲೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರಾದ 24 ಕುಟುಂಬಗಳಿಗೆ ಪರಿಹಾರ ನೀಡಿ ಎಂದು ನ್ಯಾಯಮೂರ್ತಿಗಳ ಸಮಿತಿ ಹೈಕೋರ್ಟ್​ಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಘಟನೆ ನಡೆದ ದಿನವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದೆ. ಕೂಡಲೇ ಪರಿಹಾರ ನೀಡಬೇಕು ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೊರೆಸ್ವಾಮಿಗೆ ಅಭಿನಂದನೆ:

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ತಮ್ಮ 104 ನೇ ವರ್ಷ ವಯಸ್ಸಿನಲ್ಲಿ ಕೋವಿಡ್ ಗೆದ್ದು ಬಂದಿದ್ದಾರೆ. ಈ ಹಿರಿಯ ಜೀವಕ್ಕೆ ಇನ್ನಷ್ಟು ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಕೊರೊನಾಗೆ ಭಯ ಪಡದಿರಿ. ಚಿಕಿತ್ಸೆಯ ಜತೆಗೆ ಆತ್ಮ ವಿಶ್ವಾಸ ನಿಮ್ಮೊಂದಿಗಿರಲಿ ಎಂದು ಎಸ್.ಆರ್. ಪಾಟೀಲ್ ಹೇಳಿದರು.

ABOUT THE AUTHOR

...view details