ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ಎರಡುದಿನಗಳಿಂದ ಕೆಎಸ್ಆರ್ಟಿಸಿ ಹೆಸರು ಇನ್ಮುಂದೆ ಕೇರಳದ ಪಾಲು ಅಂತ ಸುದ್ದಿಯಾಗಿತ್ತು. ಇದೀಗ ಕೆಎಸ್ಆರ್ಟಿಸಿ ಎಂಬ ಹೆಸರು ಕರ್ನಾಟಕದಿಂದ ಕೈತಪ್ಪಿದೆ ಎಂಬ ಆತಂಕ ಪಡಬೇಕಾಗಿಲ್ಲ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಕಟಣೆ ತಿಳಿಸಿದ್ದಾರೆ.
ಕರ್ನಾಟಕವು ಇನ್ನು ಮುಂದೆಯೂ ಕೆಎಸ್ಆರ್ಟಿಸಿ ಎಂಬ ಹೆಸರನ್ನು ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದು ಸವದಿ ಅವರು ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ "ಕೆಎಸ್‌ಆರ್‌ಟಿಸಿ” ಎಂದು ಬಳಸುವಂತಿಲ್ಲವೆಂದು, ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ, ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂದು ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ ಎಂಬುದು ದೃಢಪಟ್ಟಿದ್ದು ಅನವಶ್ಯಕ ಅಪಪ್ರಚಾರಕ್ಕೆ ಯಾರೂ ಕಿವಿಕೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಯಾಕೆಂದರೆ ನಮ್ಮ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ಅವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್ಆರ್ಟಿಸಿಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣಪತ್ರದ ವಿರುಧ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.