ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಆರ್ಥಿಕ ಇಲಾಖೆ ಏಪ್ರಿಲ್ ತಿಂಗಳಲ್ಲೂ ಎಲ್ಲಾ ಇಲಾಖೆಗಳಿಗೆ ಕೆಲ ನಿರ್ಬಂಧಗಳನ್ನು ಹಾಕಿದೆ. ಯಾವುದೇ ಅನಗತ್ಯ ಖರ್ಚು, ದುಂದುವೆಚ್ಚ ಮಾಡದಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.
ನೌಕರರ ವೇತನ, ಪಿಂಚಣಿ, ಕಚೇರಿ ವೆಚ್ಚ, ದೂರವಾಣಿ ಶುಲ್ಕ, ಸಂಚಾರ ವೆಚ್ಚ, ಕಟ್ಟಡ ವೆಚ್ಚ, ಸಾರಿಗೆ ವೆಚ್ಚ, ಗುಪ್ತಚರ ಸೇವೆ ವೆಚ್ಚ, ಆಸ್ಪತ್ರೆ, ಪಶು ಆಸ್ಪತ್ರೆಗಳಿಗೆ ಔಷಧ ಖರೀದಿ, ನಿವೃತ್ತಿ ವೇತನ, ಸಾಮಾಜಿಕ ಭದ್ರತಾ ಪಿಂಚಣಿ, ಅನ್ನಭಾಗ್ಯ ಯೋಜನೆಯಡಿ ನೀಡುವ ಸಹಾಯಧನ, ಆರೋಗ್ಯ ಕವಚ, ಆರೋಗ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚಗಳಿಗೆ ಬಜೆಟ್ನಲ್ಲಿ ಮೀಸಲಿಟ್ಟಿರುವ 1/12ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಬಹುದಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಈ ಮೇಲಿನ ವೆಚ್ಚಗಳನ್ನು ಬಿಟ್ಟು ಇತರ ಖರ್ಚಿಗಾಗಿ ಹಣದ ಅಗತ್ಯವಿದ್ದರೆ ಅದಕ್ಕಾಗಿ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕಾಗಿದೆ. ಏಪ್ರಿಲ್ ತಿಂಗಳ ವೇತನವನ್ನು ಮಾತ್ರ ಬಿಡುಗಡೆ ಮಾಡಬಹುದು ಎಂದು ನಿರ್ದೇಶನ ನೀಡಿದೆ.
ಹೊಸ ವಾಹನ, ಪೀಠೋಪಕರಣಗಳ ಖರೀದಿ, ದೊಡ್ಡ ಮಟ್ಟದಲ್ಲಿ ಕಟ್ಟಡಗಳ ದುರಸ್ತಿ ಕಾರ್ಯ, ನಿರ್ಮಾಣವನ್ನು ಮಾಡುವಂತಿಲ್ಲ. ಜೊತೆಗೆ ಬಾಕಿ ವೇತನವನ್ನು ಆರ್ಥಿಕ ಇಲಾಖೆಯ ಅನುನತಿ ಇಲ್ಲದೆ ಪಾವತಿಸುವ ಹಾಗಿಲ್ಲ ಎಂದು ಆರ್ಥಿಕ ಇಲಾಖೆ ಇದೇ ವೇಳೆ ತಿಳಿಸಿದೆ.
ಅದರಂತೆ ಕೆಲ ಸಂಸ್ಥೆಗಳಿಗೆ ಏಪ್ರಿಲ್ ತಿಂಗಳ ವೇತನ ನೀಡಲು ಹಣವನ್ನು ಮೀಸಲಿಟ್ಟಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳು, ಕೇಂದ್ರಗಳ ನೌಕರರಿಗೆ ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕಾಗಿರುವ ವೇತನದ ಹಣವನ್ನು ಮೀಸಲಿಡಲಾಗಿದೆ. ಅದರಂತೆ ಏಪ್ರಿಲ್ ತಿಂಗಳ ನಿಮ್ಹಾನ್ಸ್ ಸಿಬ್ಬಂದಿ ವೇತನಕ್ಕಾಗಿ 4.86 ಕೋಟಿ ರೂ., ಕಿದ್ವಾಯಿ ಸ್ಮಾರಕ ಸಂಸ್ಥೆ 7.53 ಕೋಟಿ ರೂ., ಜಯದೇವ ಹೃದ್ರೋಗ ಆಸ್ಪತ್ರೆ 5.91 ಕೋಟಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ 2.71 ಕೋಟಿ ರೂ., ಬೆಂಗಳೂರು ವೈದ್ಯಕೀಯ ಕಾಲೇಜು 15.01 ಕೋಟಿ ರೂ., ಮೈಸೂರು ಮೆಡಿಕಲ್ ಕಾಲೇಜು 10.59 ಕೋಟಿ ರೂ., ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ 1.83 ಕೋಟಿ ರೂ. ವೇತನ ಹಣವನ್ನು ಮೀಸಲಿರಿಸಲಾಗಿದೆ.