ಬೆಂಗಳೂರು: ಗ್ಯಾರಂಟಿಗಳ ಜಾರಿಗೆ ನೀಡಿದ್ದ ಸಮಯ ಮುಗಿದಿದ್ದು ಇನ್ಮುಂದೆ ಯಾರೂ ರಾಜ್ಯದಲ್ಲಿ ವಿದ್ಯುತ್ ಬಿಲ್ ಕಟ್ಟಬಾರದು, ಮಹಿಳೆಯರು ಬಸ್ ಟಿಕೆಟ್ ಪಡೆಯಬಾರದು ಎಂದು ನಾಡಿನ ಜನತೆಗೆ ಬಿಜೆಪಿ ನಾಯಕ ಆರ್. ಅಶೋಕ್ ಕರೆ ನೀಡಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ಜಾರಿ ಮಾಡಬೇಕು, ಭರವಸೆ ವೇಳೆ ಷರತ್ತು ಇರಲಿಲ್ಲ, ಈಗಲೂ ಷರತ್ತು ಬೇಡ, ಷರತ್ತು ಹಾಕಿದರೂ ನಮ್ಮ ಹೋರಾಟ ಇರಲಿದೆ, ರಾಜ್ಯ ಪ್ರವಾಸ ಮಾಡಿ ಸರ್ಕಾರಕ್ಕೆ ಚಳಿ ಜ್ವರ ಬಿಡಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಪ್ರತಿಪಕ್ಷವಾಗಿ ಕೆಲಸ ಮಾಡುವ ಮತ್ತು ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಆರಂಭಿಸಿದೆ. ಹೊಸ ಸರ್ಕಾರ ರಚನೆಯಾಗಿದೆ, ಮಂತ್ರಿ ಕಾರ್ಡ್ ಗ್ಯಾರಂಟಿ ಯಾರಿಗೆ ಎಂಬುದು ಗೊತ್ತಾಗಿಲ್ಲ. ಇದು ಡಬಲ್ ಸ್ಟೇರಿಂಗ್ ಸರ್ಕಾರ. ಡಿಸಿಎಂ ಎನ್ನುವುದು ಸಾಂವಿಧಾನಿಕ ಹುದ್ದೆಯಲ್ಲ, ನಾನು, ಕಾರಜೋಳ ಈ ಹುದ್ದೆಯಲ್ಲಿದ್ದೆವು. ಆದರೆ ಇಲ್ಲಿ ಡಿಸಿಎಂ ಸಿಎಂನ ಓವರ್ ಟೇಕ್ ಮಾಡಿ ಮಾತನಾಡುತ್ತಿದ್ದಾರೆ. ಧಮ್ಕಿ ಹಾಕುವ ರೀತಿ ಮಾತನಾಡುತ್ತಾರೆ. ಅದು ಅವರ ಹಣೆಬರಹ ಏನಾದರೂ ಮಾಡಿಕೊಳ್ಳಲಿ. ಆದರೆ ಗ್ಯಾರಂಟಿ ಈಡೇರಿಸುವ ಕೆಲಸ ಡಬಲ್ ಸ್ಟೇರಿಂಗ್ ಸರ್ಕಾರ ಮಾಡದೆ ಇರುವುದು ಜನರಿಗೆ ಮಾಡಿದ ದೊಡ್ಡ ಅಪಮಾನ ಎಂದು ಟೀಕಿಸಿದರು.
ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಬಂದು ಒಂದೊಂದು ಗ್ಯಾರಂಟಿ ಕಾರ್ಡ್ ಹಿಡಿದರು. ಸರ್ಕಾರ ಬಂದ ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಜಾರಿ ಎಂದಿದ್ದರು ಆದರೆ ಈಗ ದೆಹಲಿಗೆ ಹೋಗಿ ಖಾತೆ ಗ್ಯಾರಂಟಿ ಚರ್ಚೆ ಆಗುತ್ತಿದೆ. ಗ್ಯಾರಂಟಿಗಳ ಬಗ್ಗೆ ಸಿಎಂ ಹೇಳುವ ಮೊದಲೇ ಡಿಸಿಎಂ ಮಾತನಾಡುತ್ತಿದ್ದಾರೆ. ದಾರೀಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡೋಕಾಗುತ್ತಾ ಎನ್ನುತ್ತಿದ್ದೀರಲ್ಲ.. ಹಿಂದೆ ಇದೇ ದಾರಿಲಿ ಹೋಗೋರಿಗೆಲ್ಲಾ ನೀವು ಗ್ಯಾರಂಟಿ ಕಾರ್ಡ್ ಯಾಕೆ ಕೊಟ್ರಿ? ಪ್ರಣಾಳಿಕೆಯಲ್ಲಿ ಕಂಡೀಷನ್ ಇರಲಿಲ್ಲ, ಸಿದ್ದರಾಮಯ್ಯ ಸ್ವತಃ ನಾನು ಕರೆಂಟ್ ಬಿಲ್ ಕಟ್ಟಲ್ಲ, ನೀವು ಕಟ್ಟಬೇಕಿಲ್ಲ ಎಂದಿದ್ದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ಮಾವನ ಮನೆಗೆ ಹೋಗೋರಿಗೆ, ಸೊಸೆ ಕರೆತರಲು ಅತ್ತೆ ಹೋದರೆ ಫ್ರೀ, ದೇವಸ್ಥಾನಕ್ಕೆ ಹೋದರೆ ಫ್ರೀ, ಹಾಸನಕ್ಕೆ ಹೋಗಲು ಫ್ರೀ, ಕೆಎಸ್ಆರ್‌ಟಿಸಿ ಬಸ್ ನಲ್ಲಿ ಮಹಿಳೆಯರು ಟಿಕೆಟ್ ತೆಗೆದುಕೊಳ್ಳಬೇಕಿಲ್ಲ ಎಂದಿದ್ದರು. ಈಗ ದಾರೀಲಿ ಹೋಗೋರಿಗೆ ಕೊಡೊಕಾಗುತ್ತಾ ಎನ್ನುತ್ತಿದ್ದೀರಿ, ಇದು ಡಬಲ್ ಸ್ಟಾಂಡರ್ಡ್ ಎಂದರು.
ಗ್ಯಾರಂಟಿಗಳ ಜಾರಿಗೆ ಈಗ ಅಂಕಿ ಅಂಶ ಲೆಕ್ಕಹಾಕಬೇಕು ಎನ್ನುತ್ತೀರಲ್ಲ. 13 ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯಗೆ ಜ್ಞಾನ ಇರಲ್ಲವಾ? ಎಷ್ಟು ಜನ ಮಹಿಳೆಯರಿದ್ದಾರೆ, ಎಷ್ಟು ಬಿಪಿಎಲ್ ಕುಟುಂಬ ಇವೆ, ಎಷ್ಟು ವಿದ್ಯುತ್ ಉತ್ಪಾದನೆ ಆಗಲಿದೆ, 200 ಯೂನಿಟ್ ಉಚಿತ ಕೊಟ್ಟರೆ ಏನಾಗಲಿದೆ ಎನ್ನುವ ಮಾಹಿತಿ ಇಲ್ಲದೆ ಪ್ರಣಾಳಿಕೆ ಮಾಡಿದಿರಾ? ಈಗ ಎಲ್ಲಾ ಲೆಕ್ಕ ಹಾಕಬೇಕು ಅನ್ನುತ್ತಿದ್ದೀರಲ್ಲ. ಡಿಪ್ಲೊಮಾ ಮಾಡಿದವರಿಗೆ ಮಾಸಿಕ ಮೂರು ಸಾವಿರ ಎಂದಿದ್ದವರು ಈಗ ಈ ವರ್ಷ ಪಾಸ್ ಔಟ್ ಆದವರಿಗೆ ಎನ್ನುತ್ತಿದ್ದಾರೆ. ಈ ವರ್ಷ ಪಾಸಾದವರು ಇವರಿಗೆ ಯಾಕೆ ಅರ್ಜಿ ಹಾಕುತ್ತಾರೆ? ಈ ಹಿಂದಿನ ಪಾಸೌಟ್ ಆದ ನಿರುದ್ಯೋಗಿಗಳ ಪಾಡೇನು? ಪ್ರತಿ ಮನೆಯ ಯಜಮಾನತಿಗೆ ಎರಡು ಸಾವಿರ ಕೊಡುವುದಾಗಿ ಹೇಳಿದ್ದೀರಿ. ಬಡವರು, ಸಿರಿವಂತರು ಎಂದಿರಲಿಲ್ಲ, ಬಿಪಿಎಲ್, ಎಪಿಎಲ್ ಎಂದಿಲ್ಲ ಈಗ ಕಂಡೀಷನ್ ಎನ್ನುತ್ತಿದ್ದೀರಿ. ಮತ ಪಡೆಯುವ ಮೊದಲೇ ಯಾಕೆ ನೀವು ಕಂಡೀಷನ್ಸ್ ಅಪ್ಲೆ ಅಂತಾ ಹೇಳಲಿಲ್ಲ, ಇದು ರಾಜ್ಯದ ಜನತೆಗೆ ಮಾಡಿದ ದೊಡ್ಡ ಮೋಸ. ಜನ ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದರು.