ಬೆಂಗಳೂರು: ನ್ಯಾಯಾಲಯ ಪಾದಯಾತ್ರೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ಪ್ರತಿಭಟನೆ ನಮ್ಮ ಹಕ್ಕು ಎಂದು ಸಿದ್ದರಾಮಯ್ಯ ಹಠ ಮುಂದುವರಿಸುತ್ತಿದ್ದಾರೆ. ನ್ಯಾಯಾಲಯದ ಮೇಲೂ ಕಾಂಗ್ರೆಸ್ಸಿಗರಿಗೆ ಗೌರವ ಇಲ್ಲವೇ? ಕಾಂಗ್ರೆಸ್ ನಾಯಕರು ತಮ್ಮ ನೀಚ ರಾಜಕಾರಣಕ್ಕಾಗಿ ಸಂವಿಧಾನದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಸೂಪರ್ ಸ್ಪ್ರೆಡ್ಡರ್ ಕಾಂಗ್ರೆಸ್ ಎನ್ನುವ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಿಲ್ಲಿಸುವಂತೆ ಸೋಂಕಿತರಾದ ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಸಿ.ಎಂ. ಇಬ್ರಾಹಿಂ, ಎನ್.ಎಚ್. ಶಿವಶಂಕರ ರೆಡ್ಡಿ, ಕಾಂಗ್ರೆಸ್ ಹಿರಿಯ ನಾಯಕರೂ ಮನವಿ ಮಾಡುತ್ತಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇದಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಟೀಕಿಸಿದೆ.
ಡಿ ಕೆ ಶಿವಕುಮಾರ್ ಅವರೇ, ನೀವು ಮೇಕೆದಾಟು ಹೋರಾಟ ನಡೆಸಿ. ಆದರೆ ಅದಕ್ಕೆ ಸಮಯ ಸಂದರ್ಭದ ಅರಿವು ಬೇಡವೇ? ಕೋವಿಡ್ ಯಾತ್ರೆಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ. ಎಚ್ಚೆತ್ತುಕೊಳ್ಳಿ, ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣದಾಟಿಸಬೇಡಿ ಎಂದು ಬಿಜೆಪಿ ಕಿಡಿಕಾರಿದೆ.