ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ತಣ್ಣಗಾಗುತ್ತಿದ್ದಂತೆ ಸಿಎಂ ಪರ-ವಿರೋಧವಾಗಿ ಸಹಿ ಸಂಗ್ರಹ ವಿಷಯ ಮುನ್ನೆಲೆಗೆ ಬಂದಿದೆ. ಪಕ್ಷದಲ್ಲಿ ಆಂತರಿಕ ಕಲಹಕ್ಕೆ ವೇದಿಕೆ ಕಲ್ಪಿಸುವ ಈ ಬೆಳವಣಿಗೆಗೆ ತಡೆವೊಡ್ಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂದಾಗಿದ್ದಾರೆ. ಸಹಿ ಸಂಗ್ರಹ ಮಾಡುವುದು, ರಾಜಕೀಯ ಹೇಳಿಕೆ ನೀಡುವುದನ್ನು ಮಾಡದಂತೆ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಯಡಿಯೂರಪ್ಪ ಪರ ಶಾಸಕರ ಸಹಿ ಸಂಗ್ರಹ ಮಾಡಿದ್ದು, ಅದನ್ನು ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ಅರವಿಂದ ಬೆಲ್ಲದ್, ಎಂ.ಪಿ ಕುಮಾರಸ್ವಾಮಿ ಸಹಿ ಸಂಗ್ರಹ ಹಳೆಯದು ಎಂದು ಪ್ರತಿ ಹೇಳಿಕೆ ನೀಡಿರುವುದರಿಂದ ಕೇಸರಿ ಪಾಳಯದಲ್ಲಿ ಸಹಿ ಸಂಗ್ರಹದ ಹೊಸ ವಿವಾದ ಸೃಷ್ಟಿಸಿದೆ.