ಬೆಂಗಳೂರು:ಸುಳ್ಳು ಆರೋಪ ಪ್ರಕರಣಗಳನ್ನು ಆರಂಭದಲ್ಲೇ ಚಿವುಟಿ ಹಾಕಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಅತ್ತೆ, ಮಾವನ ವಿರುದ್ಧ ಸೊಸೆ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿದೆ. ಜೊತೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಉಚ್ಛ ನ್ಯಾಯಾಲಯ ತನ್ನ ವಿಚಾರಣೆಯಲ್ಲಿ ಉಲ್ಲೇಖಿಸಿದೆ.
ತಮ್ಮ ಸೊಸೆ ಶೃತಿ ದಾಖಲಿಸಿರುವ ಕ್ರಿಮಿನಲ್ ಕೇಸ್ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ 67 ವರ್ಷದ ಚಂದ್ರಶೇಖರಗೌಡ - ವರಲಕ್ಷ್ಮಿ ದಂಪತಿ ಹಾಗೂ ಇವರ ಇಬ್ಬರು ಪುತ್ರಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಶೃತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತಿಯ ವಿರುದ್ಧ ಮಾತ್ರ ಆರೋಪಗಳಿವೆ. ಶೃತಿ ಜೊತೆಯಲ್ಲಿ ಪತಿ ಪ್ರಶಾಂತನ ತಂದೆ-ತಾಯಿ ವಾಸಿಸುತ್ತಿಲ್ಲ. ಅವರು ತಮ್ಮ ಎರಡನೇ ಮಗಳ ಜೊತೆ ಅನಂತಪುರದಲ್ಲಿದ್ದಾರೆ. ಮತ್ತೋರ್ವ ವಿವಾಹಿತ ಪುತ್ರಿ ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಿದ್ದಾರೆ. ದೂರಿನಲ್ಲಾಗಲಿ ದೋಷಾರೋಪ ಪಟ್ಟಿಯಲ್ಲಾಗಲಿ ಕುಟುಂಬ ಸದಸ್ಯರ ವಿರುದ್ಧ ಆರೋಪಗಳಿಲ್ಲ. ಹಾಗಿದ್ದೂ ಪೊಲೀಸರು ಎಲ್ಲರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂಬುವುದನ್ನು ನ್ಯಾಯ ಪೀಠ ಗಮನಿಸಿದೆ.
ಅಲ್ಲದೇ, ಇಂತಹ ಪ್ರಕರಣಗಳಲ್ಲಿ ಕುಟುಂಬ ಸದಸ್ಯರನ್ನು ಅನಗತ್ಯವಾಗಿ ಎಳೆದು ತರದಂತೆ ಸುಪ್ರೀಂಕೋರ್ಟ್ 'ಪ್ರೀತಿ ಗುಪ್ತಾ ವರ್ಸಸ್ ಸ್ಟೇಟ್ ಆಫ್ ಜಾರ್ಖಂಡ್', 'ಗೀತ ಮೆಹ್ರೋತ್ರಾ ವರ್ಸಸ್ ಸ್ಟೇಟ್ ಆಫ್ ಉತ್ತರ ಪ್ರದೇಶ' ಸೇರಿದಂತೆ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಖ್ಯವಾಗಿ ಆಧಾರವಿಲ್ಲದ ಆರೋಪಗಳನ್ನು ಪರಿಗಣಿಸಿ ಅರ್ಜಿದಾರರ ವಿರುದ್ಧದ ವಿಚಾರಣೆ ಮುಂದುವರೆಸಲು ಸಮ್ಮತಿಸಿದರೆ ನ್ಯಾಯದಾನ ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ. ಇಂತಹ ಪ್ರಕರಣಗಳನ್ನು ಮೊಗ್ಗಿನಲ್ಲಿಯೇ ಚಿವುಟಿ ಹಾಕಬೇಕೆಂದು ಹೇಳಿರುವ ನ್ಯಾಯ ಪೀಠವು ಅರ್ಜಿದಾರರ ವಿರುದ್ದದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2018ರ ಡಿ.21ರಂದು ಪ್ರಶಾಂತ್ ಹಾಗೂ ಶೃತಿ ಹೊಸಪೇಟೆಯಲ್ಲಿ ವಿವಾಹವಾಗಿದ್ದರು. ಆದರೆ, ವರ್ಷ ತುಂಬುವ ಮೊದಲೇ ದಂಪತಿ ನಡುವಿನ ವಿರಸ ತಾರಕಕ್ಕೇರಿ, ಶೃತಿ ತಮ್ಮ ಪತಿ, ಅತ್ತೆ, ಮಾವ ಹಾಗೂ ಇಬ್ಬರು ನಾದಿನಿಯರ ವಿರುದ್ಧ 2019ರ ಅ.21ರಂದು ಬಳ್ಳಾರಿಯ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498(ಎ), 323, 504, 506 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಬಳ್ಳಾರಿಯ 3ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆ ಪ್ರಾರಂಭಿಸಿದ್ದು, ಈ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಬೆಂಗಳೂರು ವಿವಿ: ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಹಿಂಪಡೆದ ಸರ್ಕಾರದ ಆದೇಶಕ್ಕೆ ತಡೆ