ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ವರದಿಯಲ್ಲಿ 2023ರ ಜನವರಿ 1ರಿಂದ ನವೆಂಬರ್ ಅಂತ್ಯದವರೆಗೆ 2,15,403 ಲಕ್ಷ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.
ಇವರಲ್ಲಿ ಶೇ.10ರಷ್ಟು ಜನರು ಸಾಕು ನಾಯಿ ಕಡಿತಕ್ಕೆ ಒಳಗಾದರೆ, ಉಳಿದ ಶೇ.90ರಷ್ಟು ಮಂದಿ ಬೀದಿ ನಾಯಿಗಳ ಕಡಿತಕ್ಕೆ ತುತ್ತಾಗಿದ್ದಾರೆ. 2021ರಲ್ಲಿ ಸುಮಾರು 1.59 ಲಕ್ಷ ಹಾಗೂ 2022ರಲ್ಲಿ ಸುಮಾರು 1.62 ಲಕ್ಷ ನಾಯಿ ಕಡಿತ ಪ್ರಕರಣ ದಾಖಲಾಗಿದ್ದವು.
ರಾಜ್ಯದಲ್ಲಿ ವಾರಕ್ಕೆ ಸರಾಸರಿ 5,080, ದಿನವೊಂದಕ್ಕೆ 700 ಡಾಗ್ ಬೈಟ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣ ವರದಿಯಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11.5 ಸಾವಿರ, ಉಡುಪಿಯಲ್ಲಿ 11 ಸಾವಿರ ಚಿತ್ರದುರ್ಗದಲ್ಲಿ 10 ಸಾವಿರ, ಧಾರವಾಡದಲ್ಲಿ 6 ಸಾವಿರ ಪ್ರಕರಣಗಳು ಕಂಡುಬಂದಿವೆ. ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ರೋಗವನ್ನು ಗುರುತಿಸಬಹುದಾದ ರೋಗ ಎಂದು ಘೋಷಿಸಲಾಗಿದೆ. ಮಾರಣಾಂತಿಕ ರೇಬೀಸ್‌ನಿಂದ ಜೀವ ರಕ್ಷಿಸಬಲ್ಲ ಔಷಧಿಗಳಾದ ಆ್ಯಂಟಿ ರೇಬಿಸ್ ವ್ಯಾಕ್ಸಿನ್ ಮತ್ತು ರೇಬಿಸ್ ಮ್ಯೂನೋಗ್ಲಾಬಿಲಿನ್‌ಗಳನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರುವಂತೆ ಕ್ರಮ ಕೈಗೊಳ್ಳಲು ಇತ್ತೀಚೆಗೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜಧಾನಿಯಲ್ಲಿ ಪೌರಕಾರ್ಮಿಕರು ಮನೆ ಮನೆ ಹೋಗಿ ಕಸ ಸಂಗ್ರಹಿಸುತ್ತಿರುವುದರಿಂದ ಬೀದಿಗೆ ಆಹಾರ ತ್ಯಾಜ್ಯ ಎಸೆಯುವುದು ಕಡಿಮೆಯಾಗಿದೆ. ಇದರಿಂದಾಗಿ ಬೀದಿ ನಾಯಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಶ್ವಾನಪ್ರಿಯರು ಒದಗಿಸುವ ಆಹಾರ ಪ್ರತಿ ಬೀದಿ ನಾಯಿಗೂ ಸಿಗುವುದಿಲ್ಲ. ಒಂದು ಹೊತ್ತು ಸಿಕ್ಕರೆ, ಇನ್ನೊಂದು ಸಿಗುತ್ತಿಲ್ಲ. ಇದರಿಂದಾಗಿ ಆಹಾರಕ್ಕಾಗಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಎಂದು ಪಾಲಿಕೆ ಅರೋಗ್ಯ ವಿಭಾಗದ ಜಂಟಿ ಆಯುಕ್ತರಾದ ಡಾ. ರವಿಕುಮಾರ್ ಹೇಳಿದ್ದಾರೆ.