ಬೆಂಗಳೂರು :ವಯಸ್ಸಾದ ನಂತರ ಅಥವಾ ಸಾವಿನ ಬಳಿಕ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡುವುದು ಸಾಮಾನ್ಯ. ಜಮೀನು ಖರೀದಿಸಿದ ನಂತರ ಯಾರಿಗೆ ಕೊಡ ಬಯಸುತ್ತೇವೆಯೋ ಅವರಿಗೆ ಆಸ್ತಿಯನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಮೋಸ ಹೋಗುವ ಸಂದರ್ಭಗಳೂ ಇರುತ್ತವೆ.
ಹಾಗಾಗಿ, ನಮ್ಮ ಜೀವಿತಾವಧಿಯಲ್ಲಿ ಅಥವಾ ಸಾವಿನ ನಂತರ ಮಕ್ಕಳಿಗೆ ಆಸ್ತಿ ವರ್ಗಾವಣೆಯಾಗುವುದನ್ನು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು. ಕೆಲವು ಸಲ ಸೂಕ್ತ ತಿಳುವಳಿಕೆ ಮತ್ತು ಕಾನೂನು ತಜ್ಞರ ಸಲಹೆ, ಮಾರ್ಗದರ್ಶನ ಇಲ್ಲದೆ ಗೊಂದಲಕ್ಕೀಡಾಗುವುದು ಉಂಟು. ತಮ್ಮ ಆಸ್ತಿಯನ್ನು ಸುರಕ್ಷಿತವಾಗಿ ವರ್ಗಾವಣೆ ಮಾಡುವುದು ಹೇಗೆಂಬುದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ಆಸ್ತಿ ವರ್ಗಾವಣೆ ಪ್ರಕ್ರಿಯೆ ಹೇಗಿರುತ್ತದೆ?:ಆಸ್ತಿ ವರ್ಗಾವಣೆ ಕಾಯಿದೆ 122ನೇ ವಿಧಿ ಅನ್ವಯ ವ್ಯಕ್ತಿಯೊಬ್ಬ ಆಸ್ತಿಯನ್ನು ‘ಗಿಫ್ಟ್ ಡೀಡ್’ ಮೂಲಕ ವರ್ಗಾವಣೆ ಮಾಡಬಹುದು. ಈ ಒಪ್ಪಂದವು ಆಸ್ತಿ ವರ್ಗಾವಣೆಯಾಗುವ ವ್ಯಕ್ತಿಯ ಪ್ರತಿ ವಿವರವನ್ನು ಒಳಗೊಂಡಿರಬೇಕು. ಆಸ್ತಿ ವರ್ಗಾವಣೆಯ ಉಲ್ಲೇಖವಿರಬೇಕು. ಆಸ್ತಿ ಉಡುಗೊರೆಯನ್ನು ಪಡೆದಾತ ಸ್ವೀಕರಿಸಿದ ಅಂಶ ಒಪ್ಪಂದದಲ್ಲಿ ಇರಲೇಬೇಕು.
ಇಲ್ಲವಾದರೆ ಅದು ‘ಗಿಫ್ಟ್ ಡೀಡ್’ ಆಗುವುದಿಲ್ಲ. ಒಂದು ಉಡುಗೊರೆಯನ್ನು ಕಾನೂನು ಬದ್ಧವಾಗಿ ಮಾಡಬೇಕಾದರೆ ಉಡುಗೊರೆ ಸ್ವೀಕಾರವಾಗಿರಬೇಕು. ಆದರೆ, ಸ್ವೀಕಾರದ ಕುರಿತು ಯಾವುದೇ ನಿರ್ದಿಷ್ಟ ರೀತಿ-ನೀತಿಗಳನ್ನು ಹೇಳಲಾಗಿಲ್ಲ. ಗಿಫ್ಟ್ ಡೀಡ್ ಪಡೆದುಕೊಳ್ಳುವ ಮೂಲಕ ಅಥವಾ ಗಿಫ್ಟ್ ಆದ ನಂತರ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉಡುಗೊರೆ ಸ್ವೀಕರಿಸಿರುವುದನ್ನು ಖಾತರಿಪಡಿಸಬಹುದು.
‘ಗಿಫ್ಟ್ಡೀಡ್’ ಪಡೆದರೂ ನೋಂದಣಿ ಕಡ್ಡಾಯ :ದಾನ ಪಡೆದುಕೊಂಡವರ ಹೆಸರಿನಲ್ಲಿ ನೋಂದಾವಣೆ ಮಾಡಿದ ಬಳಿಕ ಆಸ್ತಿಯ ದಾಖಲೆಗಳನ್ನು ನೀಡಿದರೆ ಅದು ಕೂಡ ಉಡುಗೊರೆಯನ್ನು ಸ್ವೀಕರಿಸಿದ ಕಾನೂನು ಬದ್ಧ ದಾಖಲೆಯಾಗಿರುತ್ತದೆ.
ಆದರೆ, ಆಸ್ತಿ ವರ್ಗಾವಣೆ ಕಾಯಿದೆ 123ನೇ ವಿಧಿಯನ್ವಯ ಆಸ್ತಿಯ ಹಕ್ಕುಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಮೂಲಕ ದಾನ ಪಡೆದುಕೊಳ್ಳುವವರ ಹೆಸರಿಗೆ ನೀಡಿದರೆ ಮಾತ್ರ ಗಿಫ್ಟ್ ಡೀಡ್ ಸಿಂಧುವಾಗುತ್ತದೆ.