ಬೆಂಗಳೂರು :ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿ ಜನ ತತ್ತರಿಸಿ ಹೋಗಿರುವಾಗ, ಆರ್ಥಿಕತೆ ದಿವಾಳಿಯಾಗಿರುವ ಸಂದರ್ಭದಲ್ಲಿ 'ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇತ್ತೇ? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಂದು ನಗರದ ಸ್ಕೌಟ್ಸ್ ಆವರಣದಲ್ಲಿ ಗೋ ಹತ್ಯೆ ಸುಗ್ರೀವಾಜ್ಞೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರ ಭೂ ಸ್ವಾದೀನ ಕಾಯ್ದೆಯನ್ನು ಜಾರಿಗೆ ತಂದಿದೆ.
ಆದ್ರೆ, ಈ ಬಗ್ಗೆ ಎಲ್ಲಿಯೂ ಜನರನ್ನ ಕೇಳಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವಾಗಲೂ ಜನರನ್ನು ಕೇಳಿಲ್ಲ. ಇದರ ನಡುವೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ಇದು ಬಹಳ ಮುಖ್ಯವಾಗಿತ್ತಾ? ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.
ಯಾರನ್ನ ಕೇಳಿ ಈ ಕಾಯ್ದೆಗಳನ್ನ ಜಾರಿ ಮಾಡಿದ್ರಿ, ಇದರಿಂದಾಗುವ ಧನಾತ್ಮಕ,ಋಣಾತ್ಮಕಗಳ ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದ್ರಾ?. ಇತ್ತೀಚೆಗೆ 3-4 ದಿನಗಳ ಕಾಲ ಘಾಟಿ ಸುಬ್ರಮಣ್ಯ ಜಾತ್ರೆ ನಡೆಯಿತು. ಅಲ್ಲಿ ಅರ್ಧ ಬೆಲೆಗೂ ದನಗಳನ್ನ ಕೊಳ್ಳುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ.