ಮಹದೇವಪುರ(ಬೆಂಗಳೂರು):ದೊಡ್ಡಬನಹಳ್ಳಿ ಶಾಲೆಯ ಶಿಕ್ಷಕ ನಾಗರಾಜ್ ಅವರು ಈ ಬಾರಿಯ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಸೆ. 5 ರಂದು (ಶಿಕ್ಷಕರ ದಿನ) ಭಾರತದ ರಾಷ್ಟ್ರಪತಿಗಳಿಂದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಈ ಪುರಸ್ಕಾರಕ್ಕೆ ಬೆಂಗಳೂರಿನ ಮಹದೇವಪುರದ ಕ್ಷೇತ್ರದ ದೊಡ್ಡಬನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕ ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.
ದೊಡ್ಡಬನಹಳ್ಳಿ ಫ್ರೌಡ ಶಾಲೆಯಲ್ಲಿ ನಾಗರಾಜ್ ಅವರು ವಿಜ್ಞಾನ ವಿಷಯದ ಕುರಿತಂತೆ ಉಪನ್ಯಾಸ ನೀಡುತ್ತಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಶಿಕ್ಷಕರಾಗಿ ಇವರು ಉತ್ತಮ ಸೇವೆ ಸಲ್ಲಿಸಿದ್ದು, ಇದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದಲ್ಲಿ ಇವರೊಬ್ಬರನ್ನು ಮಾತ್ರ ಈ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಶಿಕ್ಷಕರಿಗೆ ಸೆ.5 ರಂದು ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮೊಟ್ಟ ಮೊದಲಿಗೆ ಶಿಕ್ಷಕರಾಗಿ ಮಹದೇವಪುರ ಕ್ಷೇತ್ರದ ಕಾಡು ಸೊಣ್ಣಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಶಿಕ್ಷಕ ನಾಗರಾಜ್, ಅವರು ಅಲ್ಲಿ 8 ವರ್ಷ ಕೆಲಸ ಮಾಡಿ ನಂತರ ಕೆಆರ್ ಪುರ ಬಿಇಒ ಆಫೀಸ್ನಲ್ಲಿ ಬಿಸಿ ಅಧಿಕಾರಿಯಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ದೊಡ್ಡಬನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆ ಆಗಿ ವಿಜ್ಞಾನ ವಿಭಾಗದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.