ಬೆಂಗಳೂರು:ಬಣ್ಣಗಳ ಹಬ್ಬ ಹೋಳಿ, ಯಾವುದೇ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಒಬ್ಬರಿಗೊಬ್ಬರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ. ರಾಸಾಯನಿಕಯುಕ್ತ ತರಹೇವಾರಿ ಬಣ್ಣಗಳನ್ನು ಹಚ್ಚಿ ಸಂಭ್ರಮಿಸುವುದೇನೋ ಸರಿ ಆದರೆ ಬಳಿಕ ಅದರಿಂದ ಆಗುವ ಚರ್ಮ ಹಾಗೂ ಕೂದಲ ಆರೈಕೆ ಬಗ್ಗೆಯೂ ಸಹ ಕಾಳಜಿ ವಹಿಸುವುದು ಮುಖ್ಯ. ಇಲ್ಲವಾದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕುರಿತಂತೆ ವೈದ್ಯರು ಸಲಹೆ ನೀಡಿದ್ದಾರೆ.
ಹೋಳಿ ಹಬ್ಬವನ್ನು ಆಡುವ ಮೊದಲು ಮತ್ತು ನಂತರದಲ್ಲಿ ನಮ್ಮ ಕೂದಲು ಹಾಗೂ ಚರ್ಮವನ್ನು ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಂತೆ ನಗರದ ಫೊರ್ಟಿಸ್ ಆಸ್ಪತ್ರೆಯ ಚರ್ಮರೋಗ ತಜ್ಞೆಯಾದ ಡಾ.ಸ್ಮಿತಾ ವಾರಿಯರ್ ಹಾಗೂ ಡರ್ಮಟಾಲಜಿ ತಜ್ಞೆ ಡಾ.ರಶ್ಮಿ ರವೀಂದ್ರ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಹೋಳಿ ಆಡುವ ಮೊದಲು ಕೂದಲಿನ ಆರೈಕೆ:ಪ್ರತಿಯೊಬ್ಬರಿಗೂ ಕೂದಲಿನ ಮೇಲೆ ವಿಪರೀತ ಪ್ರೀತಿ ಇದ್ದೇ ಇರುತ್ತದೆ. ರಾಸಾಯನಿಕಯುಕ್ತ ಬಣ್ಣ ತಲೆಗೆ ಅಂಟುವುದನ್ನು ತಡೆಗಟ್ಟಲು ಮೊದಲು ನೆತ್ತಿ ಹಾಗೂ ಕೂದಲಿಗೆ ಎಣ್ಣೆ ಹಚ್ಚಬೇಕು. ಇದರಿಂದ ಯಾವುದೇ ರೀತಿಯ ಬಣ್ಣ ಹಚ್ಚಿದರೂ ಅದು ನೆತ್ತಿಗೆ ಅಂಟುವುದಿಲ್ಲ. ಅಂಟಿದರೂ ಅದನ್ನು ಸುಲಭವಾಗಿ ತೊಳೆಯಲು ಸಾಧ್ಯವಾಗುತ್ತದೆ. ತೆಂಗಿನಕಾಯಿ, ಜೊಜೊಬಾ ಮತ್ತು ಹರಳೆಣ್ಣೆಯಂತಹ ಎಣ್ಣೆಗಳನ್ನು ಬಳಸಬೇಕು. ಇದರ ಜೊತೆಗೆ ಎಣ್ಣೆಗೆ ಕೆಲ ಹನಿ ನಿಂಬೆರಸ ಸೇರಿಸುವುದರಿಂದ ನೆತ್ತಿಯ ಮೇಲೆ ಬಣ್ಣಗಳಿಂದ ಉಂಟಾಗುವ ಸೋಂಕು ತಡೆಗಟ್ಟಬಹುದು.
ಸ್ಕಾರ್ಫ್ ,ಕ್ಯಾಪ್‌ನಿಂದ ತಲೆಯನ್ನು ಮುಚ್ಚುವುದು:ಹೋಳಿ ಆಡುವಾಗ ಸಂದರ್ಭದಲ್ಲಿ ಸ್ಕಾರ್ಫ್ ಅಥವಾ ಕ್ಯಾಪ್‌ನಿಂದ ತಲೆಯನ್ನು ಕವರ್ ಮಾಡಿಕೊಳ್ಳುವುದು ಉತ್ತಮ. ಜೊತೆಗೆ ಕೂದಲನ್ನು ಬಿಡಿಯಾಗಿ ಬಿಡುವುದರ ಬದಲು ಗಂಟು ಕಟ್ಟುವುದರಿಂದ ಇಡೀ ಕೂದಲಿಗೆ ಬಣ್ಣ ಹತ್ತುವುದರಿಂದ ತಪ್ಪಿಸಬಹುದು. ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿ ಮತ್ತು ಶುಷ್ಕತೆಯಿಂದ ಕೂದಲು ರಕ್ಷಿಸಲು ಹೇರ್ ಕ್ರೀಮ್‌ಗಳನ್ನು ಬಳಸಬೇಕು.
ಹೋಳಿ ನಂತರದ ಕೂದಲಿನ ಆರೈಕೆ:ಹೋಳಿ ಆಡಿದ ನಂತರ ನಿಮ್ಮ ಕೂದಲನ್ನು ತಣ್ಣೀರು ಅಥವಾ ಉಗುರು ಬೆಚ್ಚಗಿನ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಒಂದೆರಡು ಬಾರಿ ಯಾವುದೇ ಶಾಂಪೂ ಹಾಕದೇ ತೊಳೆಯುವುದರಿಂದ ಕೂದಲಿಗೆ ಅಂಟಿರುವ ಬಣ್ಣ ಬಿಟ್ಟುಕೊಳ್ಳಲು ಸಹಾಯವಾಗುತ್ತದೆ. ಇದಾದ ಬಳಿಕ ಬೇಬಿ ಶಾಂಪೂ ಅಥವಾ ಸೌಮ್ಯವಾದ ಶಾಂಪೂವಿನಿಂದ ತೊಳೆಯುವುದು ಉತ್ತಮ. ರಾಸಾಯನಿಕಯುಕ್ತ ಶಾಂಪೂಗಳಿಂದ ತೊಳೆಯುವುದರಿಂದ ನಿಮ್ಮ ನೆತ್ತಿಗೆ ಶುಷ್ಕವಾಗಲು ಇಂಬು ನೀಡುದಂತಾಗುತ್ತದೆ. ಶಾಂಪೂವಿನ ಬಳಿಕ ಕಂಡಿಷನರ್ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಇದು ಅತ್ಯವಶ್ಯಕ, ಇಲ್ಲವಾದರೆ ನಿಮ್ಮ ಕೂದಲು ಶುಷ್ಕವಾಗಬಹುದು.
ಒಂದೆ ವೇಳೆ ನಿಮ್ಮ ಕೂದಲಿಗೆ ಹೆಚ್ಚು ಬಣ್ಣ ಅಂಟಿದ್ದರೆ ಬಿಯರ್ ಮೂಲಕ ಕೂದಲನ್ನು ತೊಳೆದುಕೊಳ್ಳಬಹುದು. ಬಿಯರ್ ನಿಮ್ಮ ಕೂದಲನ್ನು ಸಿಕ್ಕಾಗಾದಂತೆ ತಡೆಯುತ್ತದೆ.ನೆತ್ತಿಯಲ್ಲಿ ಕಿರಿಕಿರಿ ಉಂಟಾಗಿದ್ದರೆ ಪಲ್ ಸೈಡರ್ ವಿನೆಗರ್‌ನನ್ನು ನೀರಿನಲ್ಲಿ ಮಿಶ್ರಣ ಮಾಡಿ ಕೂದಲನ್ನು ಸ್ವಚ್ಛವಾಗಿ ತೊಳೆದು ಒಣಗಿಸುವ ಸಂದರ್ಭದಲ್ಲಿ ಕೂದಲಿಗೆ ಸೀರಮ್ ಬಳಸಬಹುದು ಉತ್ತಮ.