ಬೆಂಗಳೂರು:ಕೊರೋನಾ ಸಂದರ್ಭದಲ್ಲಿ ತಾಯಿ ಮೃತಪಟ್ಟ ಕಾರಣ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ (ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್) ಹುದ್ದೆಯಿಂದ ವಂಚಿತರಾಗಿದ್ದ ವೈದ್ಯೆಯೊಬ್ಬರ ನೆರವಿಗೆ ಹೈಕೋರ್ಟ್ ಧಾವಿಸಿದೆ.
ಅಲ್ಲದೇ, ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗಾಗಿ ವೈದ್ಯೆಗೆ ಮತ್ತೊಂದು ಅವಕಾಶ ಕಲ್ಪಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿ ಆದೇಶಿಸಿದೆ. ವೈದ್ಯಕೀಯ ಅಧಿಕಾರಿ ಹುದ್ದೆಗೆ ಬೀದರ್ನ ಡಾ. ಸ್ನೇಹಾ ಅವರನ್ನು ಪರಿಗಣಿಸುವಂತೆ ನಿರ್ದೇಶಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ಹೊರಡಿಸಿದ್ದ ಆದೇಶ ರದ್ದು ಕೋರಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದ್ರ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಜೊತೆಗೆ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಡಾ.ಸ್ನೇಹಾ ಮೆರಿಟ್ ಅಭ್ಯರ್ಥಿಯಾಗಿದ್ದಾರೆ. ವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿರುವ ಅಭ್ಯರ್ಥಿಗಿಂತ ಸ್ನೇಹಾ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಮರಿಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಅರ್ಹ ಅಭ್ಯರ್ಥಿಗಳು ಲಭ್ಯವಾಗದೇ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ದಾಖಲೆಗಳ ಪರಿಶೀಲನೆಗೆ ಹಾಜರಾಗದಿರಲು ಸ್ನೇಹಾ ಅವರಿಗೆ ಇದ್ದ ಸಂಕಷ್ಟದ ಪರಿಸ್ಥಿತಿ ಪರಿಗಣಿಸಿ ಅವರ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಪುರಸ್ಕರಿಸಿದೆ. ಜೊತೆಗೆ ಅವರ ಮನವಿ ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಸಕಾರಣ ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?:ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆ ನೇಮಕಾತಿಗೆ 2020ರ ಸೆ.10ರಂದು ಅರ್ಜಿ ಆಹ್ವಾನಿಸಿತ್ತು. ಡಾ.ಸ್ನೇಹಾ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ ಅವರು ಶೇ.61.23ರಷ್ಟು ಅಂಕ ಪಡೆದುಕೊಂಡಿದ್ದರು. ಸಾಮಾನ್ಯ ಮಹಿಳೆ ವರ್ಗದಡಿ ಮೀಸಲಾತಿಗೆ ಅವರನ್ನು ಪರಿಗಣಿಸಲಾಗಿತ್ತು. ಕೊರೊನಾ ಸಂದರ್ಭದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಇಲಾಖೆ ಮುಂದಾಗಿತ್ತು. ಆ ವೇಳೆ ಡಾ. ಸ್ನೇಹ ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ. ಮತ್ತೊಂದೆಡೆ ತಾಯಿ ಮೃತಪಟ್ಟಿದ್ದರು. ಈ ಸಂಕಷ್ಟ ಪರಿಸ್ಥಿತಿಯಿಂದ ಸ್ನೇಹಾ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ನೇಮಕಾತಿ ಅವಕಾಶದಿಂದ ಸ್ನೇಹ ವಂಚಿತರಾಗಿದ್ದರು.
ನಂತರ ಸ್ನೇಹಾ ಅವರಿಗಿಂತ ಕಡಿಮೆ ಅಂದರೆ ಶೇ.57.43ರಷ್ಟು ಅಂಕ ಪಡೆದಿದ್ದ ಮತ್ತೊಬ್ಬರನ್ನು ಈ ಕೋಟಾದಡಿ ನೇಮಕ ಮಾಡಲಾಗಿತ್ತು. ಇದರಿಂದ ಸ್ನೇಹಾ ಅವರು ಅಗತ್ಯ ದಾಖಲೆಗಳೊಂದಿಗೆ ಯಾವ ಕಾರಣಕ್ಕೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ವಿವರಣೆ ನೀಡಿದ್ದರು. ಜೊತೆಗೆ ನೇಮಕಾತಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದರು. ಅದನ್ನು ಆರೋಗ್ಯ ಇಲಾಖೆ ಪರಿಗಣಿಸದ ಕಾರಣ ಸ್ನೇಹ ಕೆಎಟಿಗೆ ಅರ್ಜಿ ಸಲ್ಲಿಸಿ, 2021ರ ಮೇ 12ರಂದು ಪ್ರಕಟಿಸಲಾಗಿದ್ದ ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನು ಪ್ರಶ್ನಿಸಿದ್ದರು.
ಸ್ನೇಹ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ಕೆಎಟಿ, ಸಾಮಾನ್ಯ ಮಹಿಳಾ ಕೋಟಾದಡಿ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿದಾರನ್ನು ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿ 2022ರ ಸೆ.16ರಂದು ಆದೇಶಿಸಿತ್ತು. ಆದೇಶ ಪ್ರಶ್ನಿಸಿ ರಾಜ್ಯ ಆರೋಗ್ಯ ಇಲಾಖೆ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ:ಕೌಟುಂಬಿಕ ಕಲಹ: ತನ್ನ 6 ತಿಂಗಳ ಮಗುವನ್ನೇ ಗಂಗಾನದಿಯಲ್ಲಿ ಎಸೆದ ಮಹಿಳೆ..!