ಬೆಂಗಳೂರು/ಮಂಗಳೂರು :ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್‌ರನ್ನ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ವೈದ್ಯಾಧಿಕಾರಿ ಕಚೇರಿಯ 9 ಮಹಿಳಾ ಸಿಬ್ಬಂದಿ ಜತೆಗೆ ಚೆಲ್ಲಾಟವಾಡುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿತ್ತು. ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಶಿಸ್ತು ಕ್ರಮಕೈಗೊಂಡು ಅಮಾನತು ಆದೇಶ ಹೊರಡಿಸಿತು.
ದ.ಕನ್ನಡ ಜಿಲ್ಲಾ ಕುಷ್ಠರೋಗ ನಿವಾರಕಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ಆಗುತ್ತಿರುವ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹಿಳಾ ಆಂತರಿಕ ದೂರು ಸಮಿತಿಯಲ್ಲಿ ದೂರು ಸ್ವೀಕೃತಿಯಾಗಿತ್ತು. ಮಹಿಳಾ ಆಂತರಿಕ ದೂರು ಸಮಿತಿ ತನಿಖೆ ನಡೆಸಿದೆ.
ತನಿಖೆಯಲ್ಲಿ ಹಾಜರಾದ ಮಹಿಳಾ ಸಿಬ್ಬಂದಿ ನೀಡಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ, ಮುಂದಿನ ದಿನಗಳಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಯವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಕ್ರಮವಹಿಸಲು ಕೋರಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013ರ ಪ್ರಕಾರ ವೈದ್ಯಾಧಿಕಾರಿಯ ಮೇಲೆ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಿದೆ.
ಈ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗಳು ಪೂರಕ ದಾಖಲಾತಿಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ವರದಿಯನ್ವಯ ಶಿಸ್ತುಕ್ರಮಕ್ಕಾಗಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಡಾ.ರತ್ನಾಕರ್ ಕರ್ತವ್ಯ ನಿರ್ಲಕ್ಷ್ಯತೆ ಗಂಭೀರ ಸ್ವರೂಪದಾಗಿದ್ದಾಗಿದೆ. ಸರ್ಕಾರಿ ನೌಕರರಿಗೆ ತಕ್ಕದಲ್ಲದ ರೀತಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.