ಬೆಂಗಳೂರು: ಕೊರೊನಾ ವೈರಸ್ ಸದ್ಯ ವಾರಿಯರ್ಸ್ ಬಿಟ್ಟಿಲ್ಲ. ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದ್ದರೂ, ಕೊರೊನಾ ವಾರಿಯರ್ಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ.
ಇದೀಗ ವಿಕ್ಟೋರಿಯಾದಲ್ಲಿ ಮತ್ತೊಬ್ಬ ವೈದ್ಯೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರು ರೇಡಿಯಾಲಜಿ ವಿಭಾಗದಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದರು. ಹೊರ ರೋಗಿಗಳ ಸ್ಕ್ರೀನಿಂಗ್ ವಿಭಾಗದಲ್ಲಿ ಇವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
ಕೊರೊನಾ ರೋಗ ಲಕ್ಷಣಗಳು ಇರುವ ರೋಗಿಗಳ ಗಂಟಲು ದ್ರವದ ಮಾದರಿ ತೆಗೆಯುತ್ತಿದ್ದರು. ಇತ್ತೀಚೆಗೆ ಮಂಗಳೂರಿಗೆ ಹೋಗಿ ಬಂದಿರುವ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.
ಜ್ವರ ಇದ್ದ ಕಾರಣಕ್ಕೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ವರದಿ ಬರುವ ತನಕ ವೈದ್ಯೆಯನ್ನ ಬೌರಿಂಗ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇರಿಸಲಾಗಿತ್ತು. ರಿಪೋರ್ಟ್ ಪಾಸಿಟಿವ್ ಬಂದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇತ್ತ ಬೆಂಗಳೂರಿಗೆ ಮತ್ತೆ ಮಹಾರಾಷ್ಟ್ರ ಕಂಟಕ ಮಾತ್ರ ಕಡಿಮೆ ಆಗಿಲ್ಲ. ಮಹಾರಾಷ್ಟ್ರದಿಂದ ಬಂದಿದ್ದ ಐವರಲ್ಲಿ ಕೊರೊನಾ ಪತ್ತೆಯಾಗಿದೆ. ಚಿಕ್ಕಜಾಲ ಸ್ಪೋರ್ಟ್ಸ್ ಹಾಸ್ಪೆಲ್ನಲ್ಲಿ ಕ್ವಾರಂಟೈನ್ನಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಾಗಲಗುಂಟೆಗೆ ಬಂದಿದ್ದ ವ್ಯಕ್ತಿಗೂ ಕೊರೊನಾ ದೃಢಪಟ್ಟಿದ್ದು, ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿರುವುದಾಗಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.